ಡೋಕ್ಲಾಮ್ ವಿವಾದ: ಎಲ್ಲಾ ರೀತಿಯ ಪರಿಣಾಮ ಎದುರಿಸಲು ಸಿದ್ಧರಾಗಿ - ಮತ್ತೆ ಭಾರತಕ್ಕೆ ಎಚ್ಚರಿಕೆ ನೀಡಿದ ಚೀನಾ

ಸಿಕ್ಕಿಂನ ಡೋಕ್ಲಾಮ್ ಪ್ರದೇಶದ ಮೇಲಿನ ಹಿಡಿತದ ವಿಚಾರಕ್ಕೆ ಸಂಬಂಧಿಸಿದಂತೆ ಇಂಡೋ-ಚೀನಾ ತಿಕ್ಕಾಟ ಮುಂದುವರೆದಿರುವಂತೆಯೇ ಅತ್ತ ಚೀನಾ ಮಾಧ್ಯಮಗಳು ಮತ್ತೆ ಭಾರತಕ್ಕೆ ಬೆದರಿಕೆ ಹಾಕುವ ಪ್ರಯತ್ನಗಳನ್ನು ಮುಂದುವರೆಸಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸಿಕ್ಕಿಂನ ಡೋಕ್ಲಾಮ್ ಪ್ರದೇಶದ ಮೇಲಿನ ಹಿಡಿತದ ವಿಚಾರಕ್ಕೆ ಸಂಬಂಧಿಸಿದಂತೆ ಇಂಡೋ-ಚೀನಾ ತಿಕ್ಕಾಟ ಮುಂದುವರೆದಿರುವಂತೆಯೇ ಅತ್ತ ಚೀನಾ ಮಾಧ್ಯಮಗಳು ಮತ್ತೆ ಭಾರತಕ್ಕೆ ಬೆದರಿಕೆ ಹಾಕುವ ಪ್ರಯತ್ನಗಳನ್ನು ಮುಂದುವರೆಸಿವೆ. 
ಚೀನಾದ ಸರ್ಕಾರಿ ಒಡೆತನದ ಪತ್ರಿಕೆ ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸಲಾಗಿದ್ದು, ಕಮ್ಯುನಿಸ್ಟ್ ದೇಶದೊಂದಿಗಿನ ವಿವಾದಿತ ಗಡಿ ಉದ್ದಕ್ಕೂ ಎಲ್ಲಾ ರೀತಿಯ ಪರಿಣಾಮವನ್ನು ಎದುರಿಸಲು ಭಾರತ ಸಿದ್ಧವಾಗಿರಲಿ ಎಂದು ಎಚ್ಚರಿಕೆ ನೀಡಲಾಗಿದೆ. 
ಚೀನಾದೊಂದಿಗಿನ 3,488 ಕಿಲೋ ಮೀಟರ್ ಉದ್ದದ ಅಡಿಯಲ್ಲಿ ಸಂಘರ್ಷದ ಹೊಸ ತಾಣಗಳನ್ನು ಚೀನಾ ತೆರೆಯಲಿದ್ದು, ಸೇನೆಯ ಸಂಪೂರ್ಣ ಪರಿಣಾಮ ಎದುರಿಸಲು ಬಾರತ ಸಿದ್ಧವಾಗಿರಬೇಕೆಂದು ಲೇಖನದಲ್ಲಿ ತಿಳಿಸಲಾಗಿದೆ. 
ಮತ್ತೊಂದೆಡೆ ರಣೋತ್ಸಾಹ ಪ್ರದರ್ಶಿಸುತ್ತಿರುವ ಚೀನಾ, ಟಿಬೆಟ್ ನಲ್ಲಿ ಲೈಫ್ ಫೈರ್ ಸಮರಾಬ್ಯಾಸ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ. ಪೀಪಲ್ಸ್ ಲಿಬರೇಶನ್ ಆರ್ಮಿ ನೈರುತ್ಯ ಚೀನಾದ ಟಿಬೆಟ್ ಪ್ರದೇಶದಲ್ಲಿ ಲೈಫ್ ಫೈರ್ ಕರತ್ತು ನಡೆಸುತ್ತಿದ್ದು, ಪಿಎಲ್ಎನ ಟಿಬೆಟ್ ಮಿಲಿಟರಿ ಕಮಾಂಡ್ ಮತ್ತು ಚೀನಾದ ಮೌಂಟೇನ್ ಬ್ರಿಗೇಡಿಯರ್ ನೇತೃತ್ವದಲ್ಲಿ ಈ ಸಮರಾಭ್ಯಾಸ ನಡೆದಿದೆ ಎಂದು ಗ್ಲೋಬಲ್ ಟೈಮ್ಸ್ ತನ್ನ ವರದಿಗಳು ಹೇಳಿಕೊಂಡಿದೆ. 
ಡೋಕ್ಲಾಮ್ ಗಡಿ ವಿವಾದ ಸಂಬಂಧ ಭಾರತದ ವಿರುದ್ಧ ಯುದ್ಧಕ್ಕೆ ಹೋಗಲೂ ಕೂಡ ಚೀನಾ ಹಿಂಜರಿಯುವುದಿಲ್ಲ. ಭಾರತದ ಮೇಲೆ ಯುದ್ಧ ಮಾಡಲು ನಾವು ಭಯಪಡುವುದಿಲ್ಲ. ನಾವು ದೀರ್ಘಾವಧಿಯ ಯುದ್ಧಕ್ಕೆ ಸಿದ್ಧರಾಗಿದ್ದೇವೆಂದೂ ಕೂಡ ಚೀನಾ ತನ್ನ ಲೇಖನದಲ್ಲಿ ಭಾರತಕ್ಕೆ ಎಚ್ಚರಿಕೆಯನ್ನು ನೀಡಿದೆ. 
ನಿನ್ನೆ ಕೂಡಾ ಚೀನಾದ ಕ್ಸಿನ್ಹುವಾ ಸುದ್ದಿಸಂಸ್ಥೆ ಭಾರತಕ್ಕೆ ಎಚ್ಚರಿಕೆ ನೀಡುವ ಲೇಖನವೊಂದನ್ನು ಪ್ರಕಟಿಸಿತ್ತು. 'ಪೂರ್ವ ಷರತ್ತು ಇಲ್ಲದೆ, ಡೋಕ್ಲಾಮ್ ನಿಂದ ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವವರೆಗೂ ರಾಜತಾಂತ್ರಿಕ ಮಾತುಕತೆಗೆ ಅವಕಾಶವೇ ಇಲ್ಲ'. ಮೊದಲು ಡೋಕ್ಲಾಮ್ ನಲ್ಲಿ ನಿಯೋಜನೆ ಮಾಡಲಾಗಿರುವ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳಿ ಎಂಬ ಚೀನಾದ ಆಗ್ರಹಕ್ಕೆ ಭಾರತ ಕಿವುಡುತನ ಪ್ರದರ್ಶಿಸುತ್ತಿದೆ ಇದು ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಲಿದೆ. 
2013, 2014ರಲ್ಲಿ ಲಡಾಕ್ ನಲ್ಲಿ ಉಭಯ ದೇಶಗಳ ನಡುವೆ ಉಂಟಾಗಿದ್ದ ಬಿಕ್ಕಟ್ಟಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಭಾರತ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಲಡಾಕ್ ವಿಷಯದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದಾಗ ರಾಜತಾಂತ್ರಿಕ ಮಾರ್ಗಗಳ ಮೂಲಕ ಬಿಕ್ಕಟ್ಟನ್ನು ನಿವಾರಿಸಲಾಗಿತ್ತು. ಆದರೆ, ಇದೀಗ ಪರಿಸ್ಥಿತಿ ಭಿನ್ನವಾಗಿದೆ. ಹೀಗಾಗಿ ಚೀನಾದ ಸಾಕಷ್ಟು ಎಚ್ಚರಿಕೆಯ ಹೊರತಾಗಿಯೂ ಭಾರತ ತನ್ನ ಮೊಂಡುತನ ಪ್ರದರ್ಶಿಸಿದರೆ, ಭಾರತ ಮತ್ತೊಮ್ಮೆ ಭಾರೀ ಮುಖಭಂಗಕ್ಕೆ ಒಳಗಾಗಬೇಕಾದೀತು ಎಂದು ಎಚ್ಚರಿಸಿತ್ತು. 
ಕಳೆದ ಒಂದು ತಿಂಗಳಿನಿಂದ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದ್ದು, ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ನಾಶ ಮಾಡಿದ್ದರು.  ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿತ್ತು. ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. ಜೂನ್‌ 6 ಘಟನೆ ಬಳಿಕ ಇಂಡೋ-ಚೀನಾ ಗಡಿ ಪ್ರಕ್ಷುಬ್ದಗೊಂಡಿದೆ.
ಭಾರತದ ಗಡಿ ರಕ್ಷಣಾ ದೃಷ್ಟಿಯಿಂದ ಭೂತಾನ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತ ಸಿಲಿಗುರಿ ಕಾರಿಡಾರ್ ನಿರ್ಮಿಸುತ್ತಿದೆ. ಒಂದು ವೇಳೆ ಈ ಕಾರಿಡಾರ್ ಪೂರ್ಣಗೊಂಡಿದ್ದೇ ಆದರೆ ಗಡಿಯಲ್ಲಿ ಚೀನಿ ಸೈನಿಕರು ಏನೇ  ಯೋಜನೆ ರೂಪಿಸಿದರೂ ಭಾರತಕ್ಕೆ ಆದರ ಮಾಹಿತಿ ಲಭ್ಯವಾಗುತ್ತದೆ. ಇನ್ನು ಇದೇ ಕಾರಿಡಾರ್ ಗೆ ಹೊಂದಿಕೊಂಡಂತೆ ಭಾರತೀಯ ಪಡೆಗಳ ಶಿಬಿರವಿದ್ದು, ಇದೇ ಕಾರಣಕ್ಕೆ ಚೀನಾ ಕೂಡ ಡೋಕ್ಲಾಮ್ ಸಮೀಪದಲ್ಲೇ ದಿಢೀರ್ ರಸ್ತೆ  ನಿರ್ಮಾಣಕ್ಕೆ ಮುಂದಾಗಿತ್ತು. ಇದನ್ನು ಯಾವಾಗ ಭಾರತೀಯ ಸೈನಿಕರು ವಿರೋಧಿಸಿದರೋ ಆಗ ಚೀನೀ ಸೈನಿಕರು ಕಾಲುಕೆರೆದು ಸಂಘರ್ಷಕ್ಕೆ ಮುಂದಾಗಿದ್ದಾರೆ ಎಂದು ಹೇಳಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com