ಚೀನಾ ದಾಳಿಗೆ ಭಾರತೀಯ ಯೋಧರ ಸಾವು: ಪಾಕ್ ವರದಿ ತಳ್ಳಿಹಾಕಿದ ಭಾರತ

ಡೋಕ್ಲಾಮ್ ವಿವಾದ ಸಂಬಂಧ ಭಾರತದ ಮೇಲೆ ಚೀನಾ ರಾಕೆಟ್ ದಾಳಿ ನಡೆಸಿದ್ದು, ದಾಳಿಯಲ್ಲಿ 150 ಭಾರತೀಯ ಯೋಧರು ಸಾವನ್ನಪ್ಪಿದ್ದಾರೆಂಬ ಪಾಕಿಸ್ತಾನ ವರದಿಗಳನ್ನು ಮಂಗಳವಾರ ಭಾರತ ತಳ್ಳಿಹಾಕಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಡೋಕ್ಲಾಮ್ ವಿವಾದ ಸಂಬಂಧ ಭಾರತದ ಮೇಲೆ ಚೀನಾ ರಾಕೆಟ್ ದಾಳಿ ನಡೆಸಿದ್ದು, ದಾಳಿಯಲ್ಲಿ 150 ಭಾರತೀಯ ಯೋಧರು ಸಾವನ್ನಪ್ಪಿದ್ದಾರೆಂಬ ಪಾಕಿಸ್ತಾನ ವರದಿಗಳನ್ನು ಮಂಗಳವಾರ ಭಾರತ ತಳ್ಳಿಹಾಕಿದೆ. 
ಡೋಕ್ಲಾಮ್ ವಿವಾದ ಸಂಬಂಧ ಪಾಕಿಸ್ತಾನ ಮಾಧ್ಯಮಗಳು ಮಾಡಿರುವ ವರದಿಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ಅವರು, ಇಂತಹ ವರದಿಗಳು ಆಧಾರ ರಹಿತವಾದದ್ದು. ದ್ವೇಷಪೂರಿತ ಹಾಗೂ ಹಾನಿಕಾರಕ ವರದಿಗಳಾಗಿವೆ. ಅರಿವಿಲ್ಲದವರಷ್ಟೇ ಇಂತಹ ವರದಿಗಳನ್ನು ಮಾಡಿರುವ ಮಾಧ್ಯಮವನ್ನು ಜವಾಬ್ದಾರಿಯುತ ಮಾಧ್ಯಮವೆಂದು ಪರಿಗಣಿಸುತ್ತಾರೆಂದು ಹೇಳಿದ್ದಾರೆ. 

ಸಿಕ್ಕಿಂ ಗಡಿ ವಿವಾದ ಸಂಬಂಧ ಭಾರತ ಮತ್ತು ಚೀನಾ ನಡುವೆ ಉಂಟಾಗಿರುವ ಬಿಕ್ಕಟ್ಟು ಕುರಿತಂತೆ ನಿನ್ನೆಯಷ್ಟೇ ವರದಿ ಮಾಡಿದ್ದ ಪಾಕಿಸ್ತಾನ ಮೂಲದ ದಿನ್ಯಾ ನ್ಯೂಸ್ ಚಾನೆಲ್ ವೊಂದು, ಡೋಕ್ಲಾಮ್ ಗಡಿ ವಿವಾದ ಸಂಬಂಧ ಗಡಿಯಲ್ಲಿ ಚೀನಾ ಭಾರತದ ಮೇಲೆ ರಾಕೆಟ್ ದಾಳಿ ನಡೆಸಿದ್ದು, ದಾಳಿಯಲ್ಲಿ 150 ಭಾರತೀಯ ಯೋಧರು ಸಾವನ್ನಪ್ಪಿದ್ದಾರೆಂದು ವರದಿಗಳನ್ನು ಮಾಡಿತ್ತು. 

ರಾಕೆಟ್ ದಾಳಿಗೆ ಹಲಾರು ಭಾರತೀಯ ಯೋಧರು ಗಾಯಗೊಂಡಿದೆ ಎಂದು ಹೇಳಿಕೊಂಡಿತ್ತು. ಅಲ್ಲದೆ, 2 ನಿಮಿಷಗಳ ವಿಡಿಯೋ ತುಣುಕನ್ನು ಪಾಕಿಸ್ತಾನ ಮಾಧ್ಯಮಗಳು ತೋರಿಸಿವೆ. 

ಚೀನಾದ ಕೇಂದ್ರೀಯ ಮಾಧ್ಯಮವೊಂದು ಈ ವಿಡಿಯೋವನ್ನು ಪ್ರಸಾರ ಮಾಡಿದ್ದು, ಭಾರತೀಯ ಯೋಧರ ಮೇಲೆ ಚೀನಾ ರಾಕೆಟ್ ಲಾಂಚರ್, ಮಷಿನ್ ಗನ್ ಹಾಗೂ ಮಾರ್ಟರ್ ಗಳನ್ನು ಬಳಸಿ ದಾಳಿ ನಡೆಸಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ತಮ್ಮ ವರದಿಯಲ್ಲಿ ಹೇಳಿಕೊಂಡಿವೆ. 

ಕಳೆದ ಒಂದು ತಿಂಗಳಿನಿಂದ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದ್ದು, ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ನಾಶ ಮಾಡಿದ್ದರು.  ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿತ್ತು. ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. ಜೂನ್‌ 6 ಘಟನೆ ಬಳಿಕ ಇಂಡೋ-ಚೀನಾ ಗಡಿ ಪ್ರಕ್ಷುಬ್ದಗೊಂಡಿದೆ.
 
ಭಾರತದ ಗಡಿ ರಕ್ಷಣಾ ದೃಷ್ಟಿಯಿಂದ ಭೂತಾನ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತ ಸಿಲಿಗುರಿ ಕಾರಿಡಾರ್ ನಿರ್ಮಿಸುತ್ತಿದೆ. ಒಂದು ವೇಳೆ ಈ ಕಾರಿಡಾರ್ ಪೂರ್ಣಗೊಂಡಿದ್ದೇ ಆದರೆ ಗಡಿಯಲ್ಲಿ ಚೀನಿ ಸೈನಿಕರು ಏನೇ  ಯೋಜನೆ ರೂಪಿಸಿದರೂ ಭಾರತಕ್ಕೆ ಆದರ ಮಾಹಿತಿ ಲಭ್ಯವಾಗುತ್ತದೆ. ಇನ್ನು ಇದೇ ಕಾರಿಡಾರ್ ಗೆ ಹೊಂದಿಕೊಂಡಂತೆ ಭಾರತೀಯ ಪಡೆಗಳ ಶಿಬಿರವಿದ್ದು, ಇದೇ ಕಾರಣಕ್ಕೆ ಚೀನಾ ಕೂಡ ಡೋಕ್ಲಾಮ್ ಸಮೀಪದಲ್ಲೇ ದಿಢೀರ್ ರಸ್ತೆ  ನಿರ್ಮಾಣಕ್ಕೆ ಮುಂದಾಗಿತ್ತು. ಇದನ್ನು ಯಾವಾಗ ಭಾರತೀಯ ಸೈನಿಕರು ವಿರೋಧಿಸಿದರೋ ಆಗ ಚೀನೀ ಸೈನಿಕರು ಕಾಲುಕೆರೆದು ಸಂಘರ್ಷಕ್ಕೆ ಮುಂದಾಗಿದ್ದಾರೆ ಎಂದು ಹೇಳಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com