ಕಾಶ್ಮೀರ ಪರಿಸ್ಥಿತಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಆರ್ ಪಿಎಫ್ ಮಹಾನಿರ್ದೇಶಕ ರಾಜೀವ್ ರಾಯ್ ಭಟ್ನನಗರ್ ಅವರು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷದಲ್ಲಿ ಕಲ್ಲು ತೂರಾಟ ಇಳಿಕೆ ಕಂಡಿದೆ. 2016ರಲ್ಲಿ 1,590 ಬಾರಿ ಕಲ್ಲು ತೂರಾಟ ನಡೆದಿದ್ದವು. ಪ್ರಸಕ್ತ ವರ್ಷದ 424 ಬಾರಿ ಕಲ್ಲು ತೂರಾಟ ಘಟನೆಗಳು ನಡೆದಿವೆ ಎಂದಿದ್ದಾರೆ.
ಕಲ್ಲು ತೂರಾಟ ಘಟನೆಗಳು ಇಳಿಕೆ ಕಾಣಲು ಸರ್ಕಾರ ಹಾಗೂ ಸೇನೆ ತೆಗೆದುಕೊಂಡ ಹಲವು ಕಠಿಣ ಕ್ರಮಗಳು ಪ್ರಮುಖ ಪಾತ್ರವನ್ನು ವಹಿಸಿವೆ. ಕಲ್ಲುತೂರಾಟಗಾರರನ್ನು ನಿಭಾಯಿಸುವುದು, ಸಂಘಟನೆಗಳು, ಪ್ರತ್ಯೇಕತಾವಾದಿಗಳ ವಿರುದ್ಧದ ತನಿಖೆಗಳು, ಜಂಟಿ ಕಾರ್ಯಾಚರಣೆಗಳು ಕಾರಣವಾಗಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕಾರ್ಯಾಚರಣೆಗೆ ಅಡ್ಡಿಯುಂಟಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಈ ವರೆಗೂ 75 ಉಗ್ರರನ್ನು ಸಿಆರ್'ಪಿಎಫ್ ಪಡೆ ಹತ್ಯೆ ಮಾಡಿದೆ. 252 ಜನರನ್ನು ಬಂಧನಕ್ಕೊಳಪಡಿಸಲಾಗಿದೆ. 118 ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಎಲ್ಲಾ ಕ್ರಮಗಳು ಕಾಶ್ಮೀರ ಪರಿಸ್ಥಿತಿ ಸುಧಾರಣೆ ಕಾಣಲು ಸಹಾಯವಾಗಿದೆ. ಪ್ರತ್ಯೇಕತಾವಾದಿಗಳು ಹಾಗೂ ಉಗ್ರ ಸಂಘಟನೆಗಳಿಗೆ ನೆರವು ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದೊಂದಿಗೆ ಸಿಆರ್ ಪಿಎಫ್ ಪಡೆ ಕೂಡ ಸಹಕಾರ ನೀಡುತ್ತಿದೆ. ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ಹಿಂಸಾಚಾರ ಸೃಷ್ಟಿಸಲು ಬರುವ ಜನರಿಗೆ ಯಾವ ಅವಕಾಶವನ್ನು ನಾವು ನೀಡುವುದಿಲ್ಲ.
ಕಾಶ್ಮೀರದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸಿಆರ್ ಪಿಎಫ್ ಹಾಗೂ ಸೇನಾ ಪಡೆ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಹೊಸ ಹೊಸ ಕಾರ್ಯತಂತ್ರಗಳನ್ನು ರೂಪಿಸಿದ ಪ್ರತಿಫಲ ಇದೀಗ ಕಾಶ್ಮೀರದಲ್ಲಿ ಕಾಣುತ್ತಿದೆ ಎಂದು ತಿಳಿಸಿದ್ದಾರೆ.