ಅಂತರಾತ್ಮದ ಮಾತುಕೇಳಿ ರಾಜೀನಾಮೆ, ಟೀಕೆಗಳಿಗೆ ಸೂಕ್ತ ಸಮಯದಲ್ಲಿ ಉತ್ತರಿಸುತ್ತೇನೆ: ನಿತೀಶ್ ಕುಮಾರ್

ಇತ್ತೀಚಿನ ದಿನಗಳಲ್ಲಿ ನಡೆದ ಕೆಲವು ಘಟನಾವಳಿಗಳಿಂದ ಮಹಾಮೈತ್ರಿ ಮುಂದುವರಿಸುವ ಸಾಧ್ಯತೆಗಳು ಇರಲಿಲ್ಲ. ಅಂತರಾತ್ಮದ ಮಾತುಕೇಳಿ ರಾಜೀನಾಮೆ ನೀಡಿದ್ದು, ಟೀಕೆಗಳಿಗೆ ಸೂಕ್ತ ಸಮಯದಲ್ಲಿ ಉತ್ತರಿಸುತ್ತೇನೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಾಟ್ನಾ: ಇತ್ತೀಚಿನ ದಿನಗಳಲ್ಲಿ ನಡೆದ ಕೆಲವು ಘಟನಾವಳಿಗಳಿಂದ ಮಹಾಮೈತ್ರಿ ಮುಂದುವರಿಸುವ ಸಾಧ್ಯತೆಗಳು ಇರಲಿಲ್ಲ. ಅಂತರಾತ್ಮದ ಮಾತುಕೇಳಿ ರಾಜೀನಾಮೆ ನೀಡಿದ್ದು, ಟೀಕೆಗಳಿಗೆ ಸೂಕ್ತ ಸಮಯದಲ್ಲಿ ಉತ್ತರಿಸುತ್ತೇನೆ  ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.

ಜೆಡಿಯು, ಆರ್ ಜೆಡಿ ಮತ್ತು ಕಾಂಗ್ರೆಸ್ ಮಿತ್ರಕೂಟಗಳ ಮಹಾಘಟ್ ಬಂಧನ್ ಮೈತ್ರಿಕೂಟದಿಂದ ಹೊರಬಂದು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ನಿತೀಶ್ ಕುಮಾರ್ ಅವರು, ಮತ್ತೆ ತಮ್ಮ ಹಳೆಯ ಮಿತ್ರ ಬಿಜೆಪಿ ಜೊತೆ ಮೈತ್ರಿ  ಮಾಡಿಕೊಂಡು 6ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿತೀಶ್ ಕುಮಾರ್ ಅವರ ಈ ನಡೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದ್ದು, ಕಾಂಗ್ರೆಸ್ ಹಾಗೂ ಆರ್ ಜೆಡಿ ಪಕ್ಷಗಳು ನಿತೀಶ್  ನಡೆಯನ್ನು ಟೀಕಿಸುತ್ತಿವೆ.

ಏತನ್ಮಧ್ಯೆ ಪಾಟ್ನಾದಲ್ಲಿರುವ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಚುಟುಕಾಗಿ ಪ್ರತಿಕ್ರಿಯಿಸಿರುವ ನಿತೀಶ್ ಕುಮಾರ್ ಅವರು, ತಮ್ಮ ವಿರುದ್ಧದ ಟೀಕೆಗಳಿಗೆ ಸೂಕ್ತ ಸಂದರ್ಭದಲ್ಲಿ  ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.  ಬಿಹಾರ ಜನತೆಯ ಹಿತಕ್ಕಾಗಿ ಆರ್ ಜೆಡಿ ಮೈತ್ರಿ ಕಡಿದುಕೊಂಡು ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಲಾಗಿದೆ. ಜನಪರ ಮತ್ತು ಭ್ರಷ್ಟಾಚಾರ ವಿರೋಧಿ ಸರ್ಕಾರವನ್ನು ಬಿಹಾರದಲ್ಲಿ  ನೀಡಲಿದ್ದೇವೆ. ನಾವು ಇಂದು ಯಾವುದೇ ನಿರ್ಧಾರ ಕೈಗೊಂಡಿದ್ದರೂ ಅದು ಬಿಹಾರ ಜನತೆಯ ಹಿತ ದೃಷ್ಟಿಯಿಂದ ಮಾತ್ರ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಇನ್ನು ಇತ್ತೀಚೆಗೆ ಮೈತ್ರಿ ಸರ್ಕಾರದಲ್ಲಿನ ಬಿಕ್ಕಟ್ಟಿನ ಕುರಿತು ಮಾತನಾಡಿದ್ದ ನಿತೀಶ್ ಕುಮಾರ್, "ಸಿಎಂ ಆಗಿದ್ದ ಅವಧಿಯಲ್ಲಿ ಸಾಧ್ಯವಾದಷ್ಟೂ ಉತ್ತಮ ಕೆಲಸ ಮಾಡಿದ್ದೇನೆ. ನೋಟು ಅಮಾನ್ಯೀಕರಣ, ಬೇನಾಮಿ ಆಸ್ತಿ ವಿರುದ್ಧ ಕ್ರಮ  ಸೇರಿದಂತೆ ಹಲವು ವಿಚಾರಗಳಲ್ಲಿ ನನ್ನ ವಿರುದ್ಧ ಆರೋಪ ಕೇಳಿ ಬಂದಿದ್ದವು. ತೇಜಸ್ವಿ ವಿರುದ್ಧ ಬೇನಾಮಿ ಆಸ್ತಿ ಆರೋಪ ಕೇಳಿಬಂದಾಗ ಅದನ್ನು ನಾನು ಹೇಗೆ ಬೆಂಬಲಿಸಲು ಸಾಧ್ಯ? ನಾನು ಯಾರ ರಾಜೀನಾಮೆಯನ್ನೂ  ಕೇಳಿರಲಿಲ್ಲ. ಆದರೆ ಭ್ರಷ್ಟಾಚಾರ ಪ್ರಕರಣ ಸಂಬಂಧ ವಿವರಣೆ ಕೇಳಿದ್ದೆ. ಆದರೆ ನನಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈ ಪರಿಸ್ಥಿತಿಯಲ್ಲಿ ಜನರಿಗೆ ಉತ್ತರಿಸಲು ಸಾಧ್ಯವಿರಲಿಲ್ಲವಾದ್ದರಿಂದ ಅಂತರಾತ್ಮದ ಮಾತು ಕೇಳಿ  ರಾಜೀನಾಮೆ ನೀಡಿದ್ದೇನೆ. ಆದರೆ ತಾವು ಮೈತ್ರಿಕೂಟದ ನಿಯಮ ಉಲ್ಲಂಘಿಸಿಲ್ಲ. ನಾನು ಮಹಾಮೈತ್ರಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟೆ. ಆದರೆ ಭ್ರಷ್ಟಾಚಾರದ ವಿಷಯದಲ್ಲಿ ರಾಜೀ ಮಾಡಿಕೊಳ್ಳುವುದಕ್ಕೆ ನಾನು ಸಿದ್ಧನಿಲ್ಲ.  ಹೀಗಾಗಿ ರಾಜೀನಾಮೆ ನೀಡಿದೆ ಎಂದು ನಿತೀಶ್ ಹೇಳಿದ್ದರು.

ನಿತೀಶ್ ಕುಮಾರ್ ನಡೆಗೆ ಕಾರಣವೇನು?
ಲಾಲು ಪ್ರಸಾದ್ ಯಾದವ್ 2005ರಲ್ಲಿ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪ ಸಂಬಂಧ ಲಾಲು ಜತೆಗೆ ಅಕ್ರಮ ಭೂ ಸ್ವಾಧೀನ ವಿಚಾರದಲ್ಲಿ ಅವರ ಪತ್ನಿ ರಾಬ್ಡಿ ದೇವಿ, ಪುತ್ರ ತೇಜಸ್ವಿ ಯಾದವ್  ವಿರುದ್ಧ ಸಿಬಿಐ ಪ್ರಕರಣ ದಾಖಲಿಕೊಂಡಿದೆ. ಇದೇ ವಿಚಾರವಾಗಿ ಇತ್ತೀಚೆಗಷ್ಟೇ ಸಿಬಿಐ ಅಧಿಕಾರಿಗಳು ಲಾಲು ಮತ್ತು ಅವರ ಕುಟುಂಬ ಸದಸ್ಯರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಇದರಿಂದ  ಮುಜುಗರಕ್ಕೀಡಾಗಿದ್ದ ನಿತೀಶ್ ಭ್ರಷ್ಟಾಚಾರ ಆರೋಪದ ವಿಚಾರವಾಗಿ ತೇಜಸ್ವಿ ಯಾದವ್ ಸ್ಪಷ್ಟನೆ ನೀಡಬೇಕು ಇಲ್ಲವೇ ಉಪಮುಖ್ಯಮಂತ್ರಿ ಹುದ್ದೆ ತೊರೆಬೇಕೆಂಬ ಷರತ್ತು ಒಡ್ಡಿದ್ದರು. ಆದರೆ ಲಾಲು ಹಾಗೂ ಅವರ ಪುತ್ರ  ಯಾವುದೇ ಪ್ರತಿಕ್ರಿಯೆ ತೋರದ ಹಿನ್ನೆಲೆಯಲ್ಲಿ ನಿತೀಶ್ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com