ಹಿಂಸಾಚಾರಕ್ಕೆ ಪಾಕ್ ಆರ್ಥಿಕ ನೆರವು: ದೆಹಲಿ, ಕಾಶ್ಮೀರದ ಹಲವೆಡೆ ಎನ್ಐಎ ದಾಳಿ; ಕ್ಷಿಪ್ರ ತಪಾಸಣೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಲು ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನ ಆರ್ಥಿಕ ನೆರವು ನೀಡುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ದೆಹಲಿ ಹಾಗೂ ಕಾಶ್ಮೀರದ ಹಲವೆಡೆ ಎನ್ಐಎ ದಾಳಿ ನಡೆಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಲು ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನ ಆರ್ಥಿಕ ನೆರವು ನೀಡುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ತನಿಖೆಯನ್ನು ಆರಂಭಿಸಿತ್ತು. ಇದರಂತೆ ರಾಜಧಾನಿ ದೆಹಲಿ ಹಾಗೂ ಕಾಶ್ಮೀರ ಸೇರಿದೆತೆ ಹಲವು ಭಾಗಗಳಲ್ಲಿ ಶನಿವಾರ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. 
ಹಿಂಸಾಚಾರ ಪೀಡಿದ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಪಾಕಿಸ್ತಾನ ಸಹಾಯ ಮಾಡುತ್ತಿದೆ ಎಂದು ಹೇಳಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಎನ್ಐಎ ತನಿಖೆ ಆರಂಭಿಸಿತ್ತು. ಪ್ರಕರಣ ಸಂಬಂಧ ಈ ಹಿಂದೆ ಪ್ರತ್ಯೇಕತಾವಾದಿಗಳನ್ನೂ ವಿಚಾರಣೆಗೊಳಪಡಿಸಿತ್ತು. 
ಇದರ ನಡುವೆಯೇ ಹಿಂಸಾಚಾರಕ್ಕೆ ಹವಾಲ ದಂಧೆ ಮೂಲಕ ಕೆಲ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಸಹಾಯ ಮಾಡುತ್ತಿವೆ ಎಂಬ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ದೆಹಲಿ ಹಾಗೂ ಕಾಶ್ಮೀರದ ಹಲವೆಡೆ ದಾಳಿ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ 
ಪ್ರತ್ಯೇಕತಾವಾದಿ ಸಯ್ಯದ್ ಅಲಿ ಶಾಹ್ ಗಿಲಾನಿ ಮತ್ತು ಹುರಿಯತ್ ಕಾನ್ಫರೆನ್ಸ್ ಇತರೆ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿರುವವರ ಮನೆಗಳ ಮೇಲೆ ಎನ್ಐಎ ದಾಳಿ ನಡೆಸಿದೆ. ಸೊನೆಪತ್ ನಲ್ಲಿ 2 ಪ್ರದೇಶ ಸೇರಿದಂತೆ ಕಾಶ್ಮೀರದಲ್ಲಿ ಒಟ್ಟು 14 ಕಡೆ, ದೆಹಲಿಯಲ್ಲಿ 7 ಪ್ರದೇಶಗಳಲ್ಲಿ ಎನ್ ಐಎ ತಂಡ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. 
ಕೆಲ ದಿನಗಳ ಹಿಂದಷ್ಟೇ ರಾಷ್ಟ್ರೀಯ ಸುದ್ದಿವಾಹಿನಿಯೊಂದು ಕುಟುಕು ಕಾರ್ಯಾಚರಣೆಯನ್ನು ನಡೆಸಿತ್ತು. ಈ ವೇಳೆ ಹುರಿಯತ್ ನಾಯಕರೊಬ್ಬರು ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಲು ಹವಾಲಾ ದಂಧೆ ಮೂಲಕ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ನಮಗೆ ಆರ್ಥಿಕ ನೆರವು ನೀಡುತ್ತಿದೆ ಎಂದು ಹೇಳಿಕೊಂಡಿದ್ದರು. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಪ್ರತ್ಯೇಕತಾವಾದಿಗಳಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆ ನಡೆಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com