ಜೂ.25 ಭಾರತದ ಇತಿಹಾಸದಲ್ಲಿಯೇ ಕರಾಳ ದಿನ: ತುರ್ತು ಪರಿಸ್ಥಿತಿ ನೆನೆದ ಪ್ರಧಾನಿ ಮೋದಿ
ಜೂನ್.25 ಭಾರತದ ಇತಿಹಾಸದಲ್ಲಿಯೇ ಕರಾಳ ದಿನವಾಗಿದ್ದು, 45 ವರ್ಷಗಳ ಹಿಂದೆ ದೇಶದ ಮೇಲೆ ಹೇರಲಾಗಿದ್ದ ತುರ್ತು ಪರಿಸ್ಥಿತಿ ಮರೆಯಲಾಗದ ದಿನವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ...
ನವದೆಹಲಿ: ಜೂನ್.25 ಭಾರತದ ಇತಿಹಾಸದಲ್ಲಿಯೇ ಕರಾಳ ದಿನವಾಗಿದ್ದು, 45 ವರ್ಷಗಳ ಹಿಂದೆ ದೇಶದ ಮೇಲೆ ಹೇರಲಾಗಿದ್ದ ತುರ್ತು ಪರಿಸ್ಥಿತಿ ಮರೆಯಲಾಗದ ದಿನವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
33ನೇ ಆವೃತ್ತಿಯ ಮನ್ ಕಿ ಬಾತ್'ನಲ್ಲಿ ಮಾತನಾಡಿರುವ ಅವರು, 1975ರ ಜೂನ್.25 ತುರ್ತುಪರಿಸ್ಥಿತಿ ಕರಾಳ ದಿನವಾಗಿದ್ದು, ದೇಶಭಕ್ತರು ಭಾರತೀಯರಾರೂ ಮರೆಯಲಾಗದ ದಿನವಾಗಿದೆ. ಇಡೀ ದೇಶವನ್ನು ಜೈಲಾಗಿ ಮಾರ್ಪಾಡಿಸಲಾಗಿತ್ತು. ಮಾಧ್ಯಮಗಳ ಶಕ್ತಿಯನ್ನು ಕಿತ್ತುಕೊಳ್ಳಲಾಗಿತ್ತು. ಅಂದಿನ ದಿನಗಳಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡುವ ಮೂಲಕ ದೇಶ ಹಾಗೂ ಪ್ರತೀಯೊಬ್ಬ ನಾಯಕರು ರಾಷ್ಟ್ರೀಯತೆಯನ್ನು ಸಾಬೀತು ಮಾಡಿದ್ದರು ಎಂದು ಹೇಳಿದ್ದಾರೆ.
ನಾನು ಗುಜರಾತ್ ನಲ್ಲಿದ್ದಾಗ, ಹೂಗುಚ್ಛದ ಬದಲಾಗಿ ಪುಸ್ತಕ ಅಥವಾ ಕರವಸ್ತ್ರಗಳನ್ನು ನೀಡುವ ಮೂಲಕ ಸಂಪ್ರದಾಯವನ್ನು ಸೃಷ್ಟಿಸಿದ್ದೆ. ಜನತೆ ಮೊದಲು ಹೂಗುಚ್ಛಗಳನ್ನು ನೀಡುವ ಬದಲಾಗಿ ಪುಸ್ತಕಗಳನ್ನು ನೀಡುವ ಸಂಪ್ರದಾಯವನ್ನು ಅಳವಡಿಸಿಕೊಳ್ಳಬೇಕು. ಖಾದಿ ಬಟ್ಟೆಗಳು ಕೂಡ ಉತ್ತಮವಾದ ಉಡುಗೊರೆಗಳೇ. ಇದರಿಂದ ಹಲವಾರು ಜನರಿಗ ಉದ್ಯೋಗ ದೊರಕಿಸಿಕೊಟ್ಟಂತಾಗುತ್ತದೆ ಎಂದಿದ್ದಾರೆ.
ನಂತರ ಕ್ರೀಡಾಲೋಕದ ಕುರಿತಂತೆ ಮಾತನಾಡಿದ ಅವರು, ಕ್ರೀಡೆಗಳತ್ತ ಒಲವು ತೋರಿಸಿದರೆ, ಅದಕ್ಕೆ ಪ್ರೋತ್ಸಾಹ ನೀಡಬೇಕು. ಬ್ಯಾಡ್ಮಿಂಟನ್ ಆಟಗಾರರಾಗಿರುವ ಕಿದಂಬಿ ಶ್ರೀಕಾಂತ್ ದೇಶ ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಿದ್ದು, ಅವರ ಸಾಧನೆಗೆ ಈ ಮೂಲಕ ಶುಭಾಶಯಗಳನ್ನು ಹೇಳುತ್ತಿದ್ದೇನೆಂದು ತಿಳಿಸಿದ್ದಾರೆ.
ಇದೇ ವೇಳೆ ಜೂ.21 ಆಚರಿಸಲಾದ ಯೋಗ ದಿನಾಚರಣೆ ಕುರಿತಂತೆ ಮಾತನಾಡಿದ ಅವರು, ಲಖನೌನಲ್ಲಿ ಆಯೋಜಿಸಲಾದ ಯೋಗ ದಿನಾಚರಣೆಯಲ್ಲಿ ಭಾಗಿಯಾಗುವ ಅವಕಾಶ ದೊರಕಿತ್ತು. ಮಳೆಯೊಂದಿಗೆ ಮೊದಲ ಬಾರಿಗೆ ಯೋಗಾಭ್ಯಾಸ ಮಾಡುವ ಅದೃಷ್ಟ ಕೂಡ ದೊರಕಿತು. ಗುಜರಾತ್ ನಲ್ಲಿ 55,000 ಜನರು ಯೋಗಾಭ್ಯಾಸ ಮಾಡಿ, ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ತಿಳಿಸಿದರು.