1962ರ ಭಾರತವೇ ಬೇರೆ, ಈಗಿನ ಭಾರತವೇ ಬೇರೆ: ಚೀನಾಗೆ ಜೇಟ್ಲಿ ತಿರುಗೇಟು

1962ರ ಯುದ್ಧದಿಂದ ಭಾರತ ಪಾಠ ಕಲಿಯಲಿ ಎಂದು ಹೇಳಿದ್ದ ಚೀನಾಗೆ ದಿಟ್ಟ ಉತ್ತರ ನೀಡಿರುವ ರಕ್ಷಣಾ ಸಚಿವ ಜೇಟ್ಲಿಯವರು 1962ರ ಭಾರತವೇ ಬೇರೆ, 2017ರ ಭಾರತವೇ ಬೇರೆ ಎಂದು ಶುಕ್ರವಾರ...
ರಕ್ಷಣಾ ಸಚಿವ ಅರುಣ್ ಜೇಟ್ಲಿ
ರಕ್ಷಣಾ ಸಚಿವ ಅರುಣ್ ಜೇಟ್ಲಿ
ನವದೆಹಲಿ: 1962ರ ಯುದ್ಧದಿಂದ ಭಾರತ ಪಾಠ ಕಲಿಯಲಿ ಎಂದು ಹೇಳಿದ್ದ ಚೀನಾಗೆ ದಿಟ್ಟ ಉತ್ತರ ನೀಡಿರುವ ರಕ್ಷಣಾ ಸಚಿವ ಅರುಣ್ ಜೇಟ್ಲಿಯವರು 1962ರ ಭಾರತವೇ ಬೇರೆ, 2017ರ ಭಾರತವೇ ಬೇರೆ ಎಂದು ಶುಕ್ರವಾರ ಹೇಳಿದ್ದಾರೆ. 
55 ವರ್ಷಗಳ ಹಿಂದೆ ಉಭಯ ರಾಷ್ಟ್ರಗಳ ನಡುವೆ ನಡೆದಿದ್ದ ಯುದ್ಧ ಕುರಿತಂತೆ ಚೀನಾ ನೀಡಿದ್ದ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, 1962ರ ಘಟನೆಯನ್ನು ಚೀನಾ ನಮಗೆ ನೆನಪಿಸಲು ಹೊರಟಿದೆ ಎಂದರೆ, 1962ರ ಭಾರತವೇ ಬೇರೆ, ಈಗಿನ ಭಾರತವೇ ಬೇರೆ ಎಂದೇ ಹೇಳಬೇಕಾಗುತ್ತದೆ ಎಂದು ಸೂಚ್ಯವಾಗಿ ನುಡಿದಿದ್ದಾರೆ. 
ಇದೇ ವೇಳೆ ಸಿಕ್ಕಿಂ ಸಮೀಪದ ವಿವಾದಿತ ಡೋಕ್ಲಮ್ ಪ್ರದೇಶದಲ್ಲಿ ಚೀನಾ ಯೋಧರು ರಸ್ತೆ ನಿರ್ಮಿಸುತ್ತಿರುವುದರಿಂದ ಗಂಭೀರ ಭದ್ರತಾ ಪರಿಣಾಮಗಳು ಉಂಟಾಗುತ್ತವೆ ಎಂದು ಚೀನಾಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. 
ನಾಥಾ ಲಾ ಪಾಸ್ ಮಾರ್ಗದಿಂದ ತೆರಳಿ ಚೀನಾದ ಮೂಲಕ ಕೈಗೊಳ್ಳುತ್ತಿದ್ದ ಮಾನಸ ಸರೋವರ ಯಾತ್ರೆಯನ್ನು ಸ್ಥಗಿತಗೊಳಿಸಿರುವ ಕೇಂದ್ರ ಸರ್ಕಾರ, ನೆರೆ ರಾಷ್ಟ್ರಕ್ಕೆ ತಾನು ಯಾವುದೇ ಸಂದರ್ಭ ಎದುರಿಸಲು ಸಿದ್ಧ ಎಂದು ಚೀನಾಗೆ ಇದೇ ವೇಳೆ ಸಂದೇಶವನ್ನು ಜೇಟ್ಲಿ ರವಾನಿಸಿದ್ದಾರೆ. 
ಭೂತಾನ್-ಭಾರತ-ಚೀನಾ ಪರಸ್ಪರ ಸಂಧಿಸುವ ಸಂಧಿ ಸ್ಥಳ ಎಂದು ಹೇಳಲಾದ ಸಿಕ್ಕಿಂ ವಲಯದ ಡೊಕ್ಲಾಮ್ ಪ್ರದೇಶದ ಮಾಲೀಕತ್ವ ಯಾರದ್ದು ಎಂಬ ಬಗ್ಗೆ ಈಗ ಭಾರತ-ಚೀನಾ ಜಟಾಪಟಿ ಆರಂಭಿಸಿವೆ. ಈ ವಲಯ ಭೂತಾನ್ ಗೆ ಸೇರಿದ್ದು ಎನ್ನಲಾಗಿದ್ದು, ಭೂತಾನ್ ಬೆಂಬಲಕ್ಕೆ ನಿಂತಿರುವ ಭಾರತೀಯ ಸೇನೆಯು, ಡೊಕ್ಲಾಮ್'ಗೆ ತನ್ನ ಸೇನೆಯನ್ನು ರವಾನಿಸಿದೆ. ಇದು ಚೀನಾವನ್ನು ಸಿಟ್ಟಿಗೆಬ್ಬಿಸಿದೆ. ಭೂತಾನ್ ಸರ್ಕಾರ ಡೊಕ್ಲಾಮ್ ವನ್ನು ಚೀನಾ ವಶಪಡಿಸಿಕೊಳ್ಳಲು ಯತ್ನಿಸಿದೆ ಎಂದು ಈಗಾಗಲೇ ಹೇಳಿದೆ. ಈ ರೀತಿ ವಶಪಡಿಸಿಕೊಳ್ಳುವುದು ತಪ್ಪು. ಭೂತಾನ್ ನೆರವಿಗೆ ಭಾರತ ಈಗ ಧಾವಿಸಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com