

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಕಾಮುಕರ ಅಟ್ಟಹಾಸ ಮೆರೆದಿದ್ದು, ಐದು ಮಂದಿ ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆ ಅವರಿಂದ ತಪ್ಪಿಸಿಕೊಳ್ಳಲು 20 ಅಡಿ ಎತ್ತರದ ಬೃಹತ್ ಗೋಡೆ ಮೇಲಿಂದ ಹಾರಿ ಕೆಳಗೆ ಬಿದ್ದಿರುವ ವಿದ್ರಾವಕ ಘಟನೆ ನಡೆದಿದೆ.
ಪೂರ್ವ ದೆಹಲಿಯ ಪಾಂಡವ ನಗರದಲ್ಲಿ ಕಳೆದ ಶನಿವಾರ ಈ ಘಟನೆ ನಡೆದಿದ್ದು, ಗೋಡೆ ಮೇಲಿಂದ ಹಾರಿದ ಮಹಿಳೆ ವಿವಸ್ತ್ರಳಾಗಿದ್ದಳು. ಮೈತುಂಬಾ ಗಾಯ ಮಾಡಿಕೊಂಡಿದ್ದ ಮಹಿಳೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಯಾರೊಬ್ಬರೂ ನೆರವಿಗೆ ಧಾವಿಸಿರಲಿಲ್ಲ. ನಗ್ನಳಾಗಿಯೇ ದಾರಿಯಲ್ಲಿ ಸಿಕ್ಕ ತುಂಡು ಬಟ್ಟೆಯನ್ನು ಧರಿಸಿ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಮಹಿಳೆಗೆ ಬಟ್ಟೆ ನೀಡಿದ ಪೊಲೀಸ್ ಸಿಬ್ಬಂದಿ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.
ಮಹಿಳೆ ಇಬ್ಬರು ಮಕ್ಕಳ ತಾಯಿಯಾಗಿದ್ದು, ಮಹಿಳೆ ನೀಡಿದ ದೂರಿನ ಅನ್ವಯ ಪ್ರಸ್ತುತ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಲಕ್ಷಯ್ ಬಲ್ಲಾ, ವಿಕಾಸ್ ಕುಮಾರ್, ನವೀನ್ ಮತ್ತು ಪ್ರತೀಕ್ ಎಂದು ಗುರುತಿಸಲಾಗಿದ್ದು, ನಾಲ್ವರೂ ಕಾಲ್ ಸೆಂಟರ್ ಉದ್ಯೋಗಿಗಳಾಗಿದ್ದಾರೆ. ಪ್ರಕರಣದ ಐದನೇ ಆರೋಪಿ ಸ್ವರಿತ್ ಟೆಕ್ ಮಹಿಂದ್ರಾ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?
ಕಳೆದ ಶನಿವಾರ ರಾತ್ರಿ ಮಹಿಳೆ ತನ್ನ ಇಬ್ಬರು ಸ್ನೇಹಿತರನ್ನು ನೋಡಲು ಹೋಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಸಿಕ್ಕ ವಿಕಾಸ್ ಆಕೆಯನ್ನು ಡ್ರಾಪ್ ಮಾಡುವುದಾಗಿ ಹೇಳಿ ಕಾರು ಹತ್ತಿಸಿಕೊಂಡಿದ್ದ. ಮಾರ್ಗ ಮಧ್ಯೆ ವಿಕಾಸ್ ನ ಇತರೆ ಇಬ್ಬರು ಸ್ನೇಹಿತರು ಕೂಡ ಕಾರು ಹತ್ತಿಕೊಂಡಿದ್ದರು. ವಿಕಾಸ್ ಪರಿಚಿತನಾದ್ದರಿಂದ ಮಹಿಳೆ ಆಕೆಯೊಂದಿಗೆ ಹೊರಟಿದ್ದಾಳೆ. ಈ ವೇಳೆ ವಿಕಾಸ್ ಆಕೆಯನ್ನು ಪುಸಲಾಯಿಸಿ ಫ್ಲಾಟ್ ವೊಂದಕ್ಕೆ ಕರೆದೊಯ್ದಿದ್ದು, ಈ ಮೂವರು ಬರುವ ಮುನ್ನವೇ ಅಲ್ಲಿ ಮತ್ತೆ ಇಬ್ಬರು ಸ್ನೇಹಿತರು ಇರುವುದು ಕಂಡುಬಂದಿದೆ.
ಮಹಿಳೆ ಫ್ಲಾಟ್ ಒಳಗೆ ಹೋಗುತ್ತಿದ್ದಂತೆಯೇ ದುಷ್ಕರ್ಮಿಗಳು ಫ್ಲಾಟ್ ಅನ್ನು ಲಾಕ್ ಮಾಡಿದ್ದು, ಆಕೆಯ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮಹಿಳೆಗೆ ಬಲವಂತವಾಗಿ ಮದ್ಯಪಾನ ಕೂಡ ಮಾಡಿಸಿದ್ದು, ಬಳಿಕ ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೂ ಆಕೆಯನ್ನು ನಿರಂತರವಾಗಿ ಒಬ್ಬರ ಬಳಿಕ ಮತ್ತೊಬ್ಬರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಕಾಮುಕರ ಕಾಟ ತಾಳದೇ ಮಹಿಳೆ ಫ್ಲ್ಯಾಟ್ ಸುತ್ತ ಇದ್ದ ಸುಮಾರು 20 ಅಡಿಯ ಗೋಡೆಯನ್ನು ಹಾರಿ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ದಾರಿಹೋಕರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಸಾವರಿಸಿಕೊಂಡು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.
ಮಹಿಳೆಯನ್ನು ಪ್ರಸ್ತುತ ದೆಹಲಿಯ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.