ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದ ತೆರವಾದ ರಾಧಾಕೃಷ್ಣ ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಏಪ್ರಿಲ್ 12ರಂದು ನಡೆಯಲಿದ್ದು ಎಐಎಡಿಎಂಕೆ ಪಕ್ಷದಿಂದ ಟಿಟಿವಿ ದಿನಕರನ್ ಅವರನ್ನು ಕಣಕ್ಕಿಳಿಸಲಾಗಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರ ಅಳಿಯ ದಿನಕರನ್ ಆಗಿದ್ದಾರೆ. ಇಲ್ಲಿ ಗಮನಾರ್ಹ ಅಂಶವೆಂದರೆ ದಿನಕರನ್ ಅವರನ್ನು ಜಯಲಲಿತಾ ಅವರು ಬದುಕಿದ್ದಾಗ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿದ್ದರು.
ಈ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರಿಕೆ ಸಲ್ಲಿಕೆ ಕಾರ್ಯ ನಾಳೆಯಿಂದ ಇದೇ ತಿಂಗಳ 23ರವರೆಗೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮಾರ್ಚ್ 27 ಕೊನೆಯ ದಿನವಾಗಿದ್ದು ಏಪ್ರಿಲ್ 15ರಂದು ಫಲಿತಾಂಶ ಪ್ರಕಟವಾಗಲಿದೆ.
ನಾಳೆಯಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಇದು ಇಡೀ ಚೆನ್ನೈ ಜಿಲ್ಲೆಗೆ ಅನ್ವಯವಾಗಲಿದೆ.