ಸಂಗ್ರಹ ಚಿತ್ರ
ದೇಶ
ಸೈನಿಕರ ಮೇಲೆ ಕಲ್ಲು ತೂರಾಟ ನಡೆಸಲು ಪಾಕ್'ನಿಂದಲೇ ಹಣ!
ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ನಡೆಯುತ್ತಿರುವ ಕಲ್ಲು ತೂರಾಟವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಾಗೂ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಹರಸಾಹಸ ಪಡುತ್ತಿದೆ...
ನವದೆಹಲಿ: ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ನಡೆಯುತ್ತಿರುವ ಕಲ್ಲು ತೂರಾಟವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಾಗೂ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಹರಸಾಹಸ ಪಡುತ್ತಿದ್ದು, ಇದರ ಬೆನ್ನಲ್ಲೇ ಸ್ಫೋಟಕ ಹಾಗೂ ಆತಂಕಕಾರಿ ಮಾಹಿತಿಯೊಂದು ಬಹಿರಂಗಗೊಂಡಿದೆ.
ಕಾಶ್ಮೀರದಲ್ಲಿ ಕಲ್ಲುತೂರಾಟ ಕುರಿತಂತೆ ಉದ್ಭವಗೊಂಡಿದ್ದ ಪ್ರಶ್ನೆಗಳಿಗೆ ಕಳವಳಕಾರಿ ಉತ್ತರ ಲಭ್ಯವಾಗಿದೆ. ಭದ್ರತಾ ಪಡೆಗಳ ಮೇಲೆ ಕಲ್ಲು ತೂರವಂತೆ ಕಾಶ್ಮೀರಿ ಯುವಕರಿಗೆ ತಲೆಕೆಡಿಸುತ್ತಿರುವ ಪಾಕಿಸ್ತಾನ, ಕಲ್ಲು ತೂರಾಟ ನಡೆಸುವವರಿಗೆ ಭರಪೂರ ಹಣವನ್ನು ಸಂದಾಯ ಮಾಡುತ್ತಿದೆ ಎಂಬ ಆಘಾತಕಾರಿ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ.
ಕಲ್ಲುತೂರಾಟ ನಡೆಸುವವರಿಗೆ ರೂ.70 ಲಕ್ಷಕ್ಕೂ ಅಧಿಕ ಹಣವನ್ನು ಪಾಕಿಸ್ತಾನ ರವಾನಿಸಿದೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗೊಂಡಿದೆ. ಈ ಕುರಿತಂತೆ ಆಂಗ್ಲ ಸುದ್ದಿವಾಹಿನಿಯೊಂದು ವರದಿಯನ್ನು ಮಾಡಿದ್ದು, ಪಾಕಿಸ್ತಾನ ಗುಪ್ತಚರ ಇಲಾಖೆ ಇಸಿಸ್ ನಿಂದ ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ ಗೆ ಹಣ ಬರುತ್ತಿದೆ. ಆ ಹಣವನ್ನು ಹುರಿಯತಂ ನಾಯಕರು ಅದರಲ್ಲೂ ವಿಶೇಷವಾಗಿ ಶಬ್ಬೀರ್ ಶಾ ಎಂಬಾತ ಹುರಿತಯ್ ಜಿಲ್ಲಾ ಘಟಕಗಳಿಗೆ ಹಂಚಿ, ಕಲ್ಲು ತೂರಾಟ ನಡೆಸುಪವರನ್ನು ಸೆಳೆಯುತ್ತಿದ್ದಾನೆಂದು ತಿಳಿಸಿದೆ.
ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್ ತಮಗೆ ಹಣ ನೀಡುತ್ತಿದ್ದರು ಎಂದು ಇತ್ತೀಚೆಗಷ್ಟೇ ಬಂಧಿತನಾಗಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಸಿಸ್ ಏಜೆಂಟ್ ಗಳಿಬ್ಬರು ತಪ್ಪೊಪ್ಪಿಕೊಂಡಿದ್ದರು. ಇದರ ಬೆನ್ನಲ್ಲೇ ಕಲ್ಲು ತೂರಾಟ ನಡೆಸುವವರಿಗೆ ಇಸಿಸ್ ಹಣ ಕೊಡುತ್ತಿದೆ ಎಂಬ ಸಂಗತಿ ಬಹಿರಂಗೊಂಡಿರುವುದರಿಂದ ಭಾರತದಲ್ಲಿ ಅದರಲ್ಲೂ ಕಾಶ್ಮೀರದಲ್ಲಿ ಭಯೋತ್ಪಾದನೆ ಪಸರಿಸಲು ಕಾಶ್ಮೀರ ಹಣದ ಹೊಳೆ ಹರಿಸುತ್ತಿದೆ ಎಂಬ ಭಾರತದ ಬಹು ದಿಂದಿನ ವಾದಕ್ಕೆ ತೂಕ ಬಂದಂತಾಗಿದೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿಯನ್ನು 2016ರ ಜುಲೈ ತಿಂಗಳಿನಲ್ಲಿ ಸೇನಾ ಹತ್ಯೆ ಮಾಡಿತ್ತು. ಇದಾದ ಬಳಿಕ ಕಾಶ್ಮೀರದಲ್ಲಿ ನಿರಂತರವಾಗಿ ಹಿಂಸಾಚಾರ ನಡೆಯುತ್ತಲೇ ಇದೆ.
ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುವುದು ಸಂಪ್ರದಾಯದಂತೆ ಆಗಿ ಹೋಗಿದೆ. ದಿನೇ ದಿನೇ ಕಲ್ಲು ತೂರಾಟ ನಡೆಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಇಸಿಸ್ ನಗದು ನೋಂದಣಿ ಪುಸ್ತಕದಲ್ಲಿ ರಾವಲ್ಪಿಂಡಿ ಹಾಗೂ ಶ್ರೀನಗರದ ನಡುವಣ ಹಣದ ಹರಿವಿನ ಪ್ರಸ್ತಾಪವಿದೆ. ಈ ರೀತಿ ಬಂದ ಹಣ ಅನಂತ್ ನಾಗ್, ಪುಲ್ವಾಮಾ ಹಾಗೂ ಕುಪ್ವಾರದಂತಹ ಪ್ರದೇಶಗಳಿಗೆ ಹೋಗುತ್ತಿದೆ. ಹೀಗಾಗಿಯೇ ಆ ಪ್ರದೇಶಗಳಲ್ಲೇ ಕಲ್ಲು ತೂರಾಟದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.
ರಾವಲ್ಪಿಂಡಿಯ ಇಸಿಸ್ ಕಚೇರಿಯಲ್ಲಿರುವ ಅಹ್ಮದ್ ಸಾಗರ್ ಎಂಬಾತ ಹುರಿಯತ್ ನಾಯಕರು ಅದರಲ್ಲೂ ವಿಶೇಷವಾಗಿ ಶಬ್ಬೀರಪ್ ಶಾ ಜತೆ ನಿರಂತರ ಸಂಪರ್ಕದಲ್ಲಿದ್ದಾನೆ. ಪಾಕಿಸ್ತಾನದಿಂದ ಬಂದ ಹಣವನ್ನು ವಿವಿಧ ಕಚೇರಿಗಳಿಗೆ ವಿತರಿಸುವ ಶಾ, ಕಲ್ಲು ತಾರಾಟ ನಡೆಸುವ ಕೆಲಸಕ್ಕೆ ಯುವಕರನ್ನು ನೇಮಿಸಿಕೊಳ್ಳುತ್ತಿದ್ದಾನೆ. ಅಹ್ಮದ್ ಸಾಗರ್ ಭಾರತದಲ್ಲಿನ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್ ಜೊತೆಗೆ ನಿಕಟವರ್ತಿಯಾಗಿದ್ದಾನೆಂದು ವರದಿಗಳು ತಿಳಿಸಿವೆ.
ಈ ಆಘಾತಕಾರಿ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಕಾಶ್ಮೀರಿ ಪ್ರತ್ಯೇಕತಾವಾದಿಗಳು ಹಾಗೂ ಹುರಿಯತ್ ನಾಯಕರ ನಡುವಿನ ವ್ಯವಹಾರಗಳು ಹಾಗೂ ಆರ್ಥಿಕ ಚಟುವಟಿಕೆಗಳ ಮೇಲೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಕಾಶ್ಮೀರ ಪೊಲೀಸ್ ಪ್ರಧಾನ ನಿರ್ದೇಶಕರಿಗೆ ನಿರ್ದೇಶಕರಿಗೆ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ