ನವದೆಹಲಿ: ದೆಹಲಿ ವಿಧಾನಸಭೆಯಲ್ಲಿ ಮಂಗಳವಾರ ನಡೆಸಲಾದ ವಿಶೇಷ ಅಧಿವೇಶನದಲ್ಲಿ ಇವಿಎಂ (ವಿದ್ಯುನ್ಮಾನ ಮತಯಂತ್ರ) ಕುರಿತಂತೆ ಬಿಜೆಪಿ ವಿರುದ್ಧ ಆರೋಪ ವ್ಯಕ್ತಪಡಿಸಿದ್ದ ಆಮ್ ಆದ್ಮಿ ಪಕ್ಷ ತೀವ್ರ ಗದ್ದಲವನ್ನುಂಟು ಮಾಡಿತ್ತು.
ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಿಜೆಪಿಗೆ ಅನುಕೂಲವಾಗುವಂತೆ ತಿರುಚಲಾಗುತ್ತಿದೆ ಎಂಬ ಆರೋಪ ಸಾಬೀತುಪಡಿಸಲು ಆಮ್ ಆದ್ಮಿ ಪಕ್ಷ ದೆಹಲಿ ವಿಧಾನಸಭಾ ಅಧಿವೇಶನದಲ್ಲಿ ಪ್ರಾತ್ಯಕ್ಷಿಕೆ ನೀಡಿತು.
ಸದನದಲ್ಲಿ ಅಣಕು ಮತಯಂತ್ರವೊಂದನ್ನು ಪ್ರದರ್ಶಿಸಿದ ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ಅವರು, ಯಾವ ಗುಂಡಿಯನ್ನು ಮತದಾರರು ಒತ್ತಿದರೂ ಬಿಜೆಪಿಗೇ ಮತ ಹೋಗುವಂತಾಗುತ್ತದೆ ಎಂಬುದನ್ನು ಸಾಬೀತು ಪಡಿಸಿದ್ದಾಗಿ ಹೇಳಿಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡುದ್ದ ಚುನಾವಣಾ ಆಯೋಗ, ಆಮ್ ಆದ್ಮಿ ಪಕ್ಷ ಪ್ರದರ್ಶಿಸಿರುವ ಅಣಕು ಮತಯಂತ್ರಕ್ಕೂ ನೈಜ ಮತಯಂತ್ರಕ್ಕೂ ವ್ಯತ್ಯಾಸವಿದೆ. ನೈಜ ಯಂತ್ರವನ್ನು ತಿರುಚಲೂಬಾರದು. ಚುನಾವಣಾ ಆಯೋಗವೇ 'ಹ್ಯಾಕಥಾನ್' ಸ್ಪರ್ಧೆಯನ್ನು ನಡೆಸಲಿದೆ. ಅಲ್ಲಿ ಬೇಕಾದರೆ ತಿರುಚಿ ತೋರಿಸಿ ಎಂದು ಸವಾಲು ಹಾಕಿದೆ.
ಚುನಾವಣಾ ಆಯೋಗ ನೀಡಿರುವ ಸವಾಲನ್ನು ಇದೀಗ ಆಮ್ ಆದ್ಮಿ ಪಕ್ಷ ಸ್ವೀಕರಿಸಿದ್ದು, ಆಭ್ಯರ್ಥಿಯ ಸೀಕ್ರೆಟ್ ಕೋಡ್ ಎಂಟ್ರಿ ಮಾಡುವ ಮೂಲಕವೂ ಇವಿಎಂ ಹ್ಯಾಕ್ ಮಾಡಬಹುದು ಎಂದು ಹೇಳಿದೆ.
ಆಯೋಗ ಏರ್ಪಡಿಸುವ ಈ ಸ್ಪರ್ಧೆಯನ್ನು ಆಪ್ ಸ್ವೀಕರಿಸಲಿದ್ದು, ಕೇವಲ 90 ಸೆಕೆಂಡ್ ಗಳಲ್ಲಿ ಇವಿಎಂ ಹ್ಯಾಕ್ ಮಾಡಿ ತೋರಿಸುತ್ತೇವೆಂದು ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಕೇಜ್ರಿವಾಲ್ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಆಯೋಗ, 90 ಸೆಕೆಂಡ್ ಗಳಲ್ಲಿ ಯಂತ್ರದ ಸ್ಕ್ರೂ ಕೂಡ ಬಿಚ್ಚಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದೆ.