ಪಾಟ್ನಾ: ತಮ್ಮ ಆಪ್ತರ ಮನೆ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿಗೆ ಸಂಬಂಧಿಸಿದಂತೆ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಮೋದಿ ಸರ್ಕಾರದ 'ಹೊಸ ಮಿತ್ರ' ಎಂದು ವ್ಯಂಗ್ಯವಾಡಿರುವ ಆರ್ ಜೆಡಿ ಮುಖ್ಯಸ್ಥ, ಈ ರೀತಿ ದಾಳಿ ಮಾಡುವುದರಿಂದ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಐಟಿ ದಾಳಿಯ ನಂತರ ಸರಣಿ ಟ್ವೀಟ್ ಮಾಡಿರುವ ಲಾಲು ಪ್ರಸಾದ್ ಯಾದವ್ ಅವರು, ಇಂತಹ ತಂತ್ರಗಾರಿಕೆಗಳಿಗೆಲ್ಲ ನಾವು ಹೆದರುವುದಿಲ್ಲ. ಕೋಮುವಾದಿ ಶಕ್ತಿಗಳ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ಬಿಜೆಪಿಯ ಹೊಸ ಮಿತ್ರನಾಗಿದ್ದು, ತಮ್ಮ ವಿರೋಧಿ ರಾಜಕಾರಣಿಗಳ ವಿರುದ್ಧ ಅದನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಲಾಲು ಆರೋಪಿಸಿದ್ದಾರೆ.
ಭೂಹಗರಣ ಹಾಗೂ ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಲಾಲು ಪ್ರಸಾದ್ ಯಾದವ್ ಅವರ ಆಪ್ತರ ಮನೆ ಮೇಲೆ ದಾಳಿ ನಡೆಸಿದೆ.
ಲಾಲು ಪ್ರಸಾದ್ ಯಾದವ್ ಅವರಿಗೆ ಸಂಬಂಧಿಸಿದ ಒಟ್ಟು 1,000 ಕೋಟಿ ರೂಪಾಯಿ ಮೊತ್ತದ ಬೇನಾಮೆ ಡೀಲ್ ಗೆ ಸಂಬಂಧಿಸಿದ ದಾಳಿ ಇದಾಗಿದ್ದು, ದೆಹಲಿಯ ಕನಿಷ್ಠ 22 ಕಡೆಗಳಲ್ಲಿ ದಾಳಿ ನಡೆದಿದೆ.