ಡೆಹ್ರಾಡೂನ್: ಉತ್ತರಾಖಂಡ್ ನಲ್ಲಿ ಸಂಭವಿಸಿರುವ ಭಾರೀ ಭೂ ಕುಸಿತದಿಂದ ಮೃತಪಟ್ಟ ಚಾರ್ ಧಾಮ್ ಪ್ರವಾಸಿಗರ ಸಂಖ್ಯೆ 13ಕ್ಕೇರಿದೆ.
ಗಡಿ ರಸ್ತೆ ಪ್ರಾಧಿಕಾರ ಕಲ್ಲು, ಮಣ್ಣುಗಳ ರಾಶಿಯನ್ನು ನಿನ್ನೆ ತೆರವುಗೊಳಿಸಿದ್ದು, ಮೃತಪಟ್ಟವರ ಸಂಖ್ಯೆ 13 ಕ್ಕೇರಿದೆ. ಚಾರ್ ಧಾಮ ಯಾತ್ರೆ ಏಪ್ರಿಲ್ 28ಕ್ಕೆ ಆರಂಭಗೊಂಡಿತ್ತು.
ಹೆಚ್ಚಿನ ಯಾತ್ರಿಕರು ಯುಮುನೋತ್ರಿ ಯಾತ್ರೆಯಲ್ಲಿ ಮೃತಪಟ್ಟರೆ, ಇಬ್ಬರು ಬದರಿನಾಥ್ ಮತ್ತು ಕೇದಾರ್ ನಾಥದಲ್ಲಿ ಮೃತಪಟ್ಟಿದ್ದಾರೆ.
ಯಾತ್ರಿಕರನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು ಮಹಿಳೆಯರು, ಮಕ್ಕಳು ಸೇರಿದಂತೆ ಹಿರಿಯ ವೃದ್ಧರನ್ನು ಮಾರ್ಗದ ಪ್ರಮುಖ ಕೇಂದ್ರಗಳಲ್ಲಿ ಆಶ್ರಯ ಪಡೆಯಲು ಸೂಚಿಸಲಾಗಿದೆ.
ಉತ್ತರಾಖಂಡ್ ವಿಪತ್ತು ತಗ್ಗಿಸುವಿಕೆ ಮತ್ತು ನಿರ್ವಹಣೆ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಪಿಯೂಷ್ ರೌಟೆಲಾ ಮಾತನಾಡಿ, ಪುಡಿಕಲ್ಲುಗುಡ್ಡೆಗಳನ್ನು ಶನಿವಾರ, ಭಾನುವಾರದ ಹೊತ್ತಿಗೆ ತೆರವುಗೊಳಿಸಲಾಗುತ್ತದೆ. ಯಾತ್ರೆ ಜೂನ್ ಅಂತ್ಯದವರೆಗೆ ಇರುತ್ತದೆ ಎಂದು ಹೇಳಿದ್ದಾರೆ.
ಭೂ ಕುಸಿತ ಉಂಟಾಗಿರುವ ಎರಡೂ ಕಡೆಗಳಲ್ಲಿ ಸುಮಾರು 15,000 ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಹೃಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ಉತ್ತರಾಖಂಡ್ ನ ಚಮೊಲಿ ಜಿಲ್ಲೆಯ ವಿಷ್ಣುಪ್ರಯಾಗ್ ಹತ್ತಿರ ಭೂಕುಸಿತದಿಂದಾಗಿ ಸ್ಥಗಿತಗೊಳಿಸಲಾಗಿತ್ತು. ಅದು ಇಂದು ಮರು ಆರಂಭಗೊಂಡಿದೆ.
ಭೂಕುಸಿತದಿಂದಾಗಿ ಬದ್ರಿನಾಥ್ ಹೆದ್ದಾರಿ ಸಮೀಪ ಹತಿ ಪರ್ಬಾತ್ ಬಳಿ ಮುಚ್ಚಲಾಗಿದ್ದ ಹೆದ್ದಾರಿಯನ್ನು ತೆರವುಗೊಳಿಸಲಾಗಿದೆ ಎಂದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ತೃಪ್ತಿ ಭಟ್ಟ್ ತಿಳಿಸಿದ್ದಾರೆ.