ಹೆತ್ತ ತಾಯಿಯ ಕೊಂದು ಆಕೆಯ ರಕ್ತದಲ್ಲಿ ಸ್ಮೈಲಿ ಬರೆದಿದ್ದ ಪುತ್ರನನ್ನು ಬಂಧಿಸಿದ ಪೊಲೀಸರು!

ಮುಂಬೈ: ಹೆತ್ತ ತಾಯಿಯನ್ನೇ ಚಾಕುವಿನಿಂದ ಇರಿದು ಕೊಂದ ಪಾಪಿ ಮಗನೊಬ್ಬ ಆಕೆಯದೇ ರಕ್ತದಿಂದ 'ಆಕೆಯಿಂದ ಸಾಕಷ್ಟು ರೋಸಿಹೋಗಿದ್ದೆ. ಸಾಧ್ಯವಾದರೆ ನನ್ನನ್ನು ಹಿಡಿದು ಗಲ್ಲಿಗೇರಿಸಿ' ಎಂದು ಸಂದೇಶ ಬರೆದಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ.
ಈ ಹಿಂದೆ ಹೆತ್ತ ಮಗಳನ್ನೇ ಕೊಂದು ತಾಯಿ ಇಂದ್ರಾಣಿ ಮುಖರ್ಜಿ ಜೈಲುಪಾಲಾಗಿರುವ ಶೀನಾಬೋರಾ ಹತ್ಯಾ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್ ಅಧಿಕಾರಿ ದ್ಯಾನೇಶ್ವರ್ ಗನೋರೆ ಅವರ ಪತ್ನಿ ದೀಪಾನಿ ಅವರನ್ನು ಅವರ ಪುತ್ರ ಸಿದ್ದಾಂತ್ ಕ್ರೂರವಾಗಿ ಕೊಂದು ಹಾಕಿದ್ದಾನೆ. ಅಲ್ಲದೆ ಆಕೆಯದೇ ರಕ್ತದಿಂದ ತಾಯಿಯ ನಡವಳಿಕೆಯಿಂದ ಬೇಸತ್ತು ಹೋಗಿದ್ದೆ. ಹೀಗಾಗಿ ಆಕೆಯನ್ನು ಕೊಂದಿರುವುದಾಗಿ ಸಾಧ್ಯವಾದರೆ ನನ್ನನ್ನು ಹಿಡಿದು ಗಲ್ಲಿಗೇರಿಸಿ ಎಂದು ಬರೆದು ಬಳಿಕ ಪರಾರಿಯಾಗಿದ್ದಾನೆ.
ಮಧ್ಯ ರಾತ್ರಿ ಕೆಲಸ ಮುಗಿಸಿ ಪೊಲೀಸ್ ಅಧಿಕಾರಿ ದ್ಯಾನೇಶ್ವರ್ ಗನೋರೆ ಅವರು ವಕೋಲಾದಲ್ಲಿರುವ ತಮ್ಮ ಮನೆಗೆ ಹೋದಾಗ ಅವರ ಪತ್ನಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದರು. "ಮಂಗಳವಾರ ರಾತ್ರಿ ಕೆಲಸ ಮುಗಿಸಿ ಸುಮಾರು 11 ಗಂಟೆಗೆ ಮನೆಗೆ ಹೋದ ಸಂದರ್ಭದಲ್ಲಿ ಮನೆಗೆ ಬೀಗ ಹಾಕಿತ್ತು. ತಾಯಿ-ಮಗ ಹೊರಗಡೆ ಹೋಗಿರಬಹುದು ಎಂದು ಎರಡು ಗಂಟೆ ಬಾಗಿಲಿಲಲ್ಲೇ ಕಾದೆ. ನಂತರ ಬಾಗಿಲ ಬಳಿ ಇದ್ದ ಡಸ್ಟ್ ಬಿನ್‌ನಲ್ಲಿ ಮನೆಯ ಬೀಗ ಸಿಕ್ಕಿತ್ತು. ಒಳಹೋಗಿ ನೋಡಿದಾಗ ನನ್ನ ಪತ್ನಿ ರಕ್ತ ಮಡುವಿನಲ್ಲಿ ಬಿದ್ದಿದ್ದಳು" ಎಂದು ದ್ಯಾನೇಶ್ವರ್ ಗನೋರೆ ಹೇಳಿದ್ದಾರೆ.
ಮೂಲಗಳ ಪ್ರಕಾರ ಮುಂಬೈನ ನ್ಯಾಶನಲ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಸಿದ್ದಾಂತ್ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದ. ಆತನ ವರ್ತನೆ ಕುರಿತು ತಾಯಿ ಎಚ್ಚರಿಕೆ ನೀಡಿದ್ದರು. ಆತನಿಗೆ ಪಾಕೆಟ್ ಮನಿ ಸಹ ಕೊಡುವುದನ್ನು ನಿಲ್ಲಿಸಿದ್ದರು. ತಾಯಿಯ ನಡವಳಿಕೆಯಿಂದ ರೋಸಿಹೋಗಿದ್ದ ಸಿದ್ಧಾಂತ್ ಅವರನ್ನು ಕೊಂದು ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕೊಲೆ ಬಳಿಕ ಜೈಪುರ್ ಗೆ ಹಾರಿದ್ದ ಪಾಪಿ ಮಗ
ಇನ್ನು ತಾಯಿಯನ್ನು ಕೊಂದಿದ್ದ ಮಗ ಸಿದ್ಧಾಂತ್ ಕೂಡಲೇ ಜೈಪುರಕ್ಕೆ ಪರಾರಿಯಾಗಿದ್ದನಂತೆ. ಈ ವಿಚಾರ ತಿಳಿದ ಪೊಲೀಸರು ಜೈಪುರಕ್ಕೆ ತೆರಳಿದರೆ ಅಲ್ಲಿಂದಲೂ ಆತ ಪರಾರಿಯಾಗಿದ್ದ. ಬಳಿಕ ಆತನ ಫೋಟೋವನ್ನು ಜೈಪುರ ಪೊಲೀಸರಿಗೆ ನೀಡಲಾಗಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದೀಗ ಪಾಪಿ ಮಗನನ್ನು ಮುಂಬೈ ಕರೆತರಲಾಗುತ್ತಿದ್ದು, ಇಂದು ಸಂಜೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


