ಕಾಶ್ಮೀರ ಹಿಂಸಾಚಾರಕ್ಕೆ ಪಾಕ್ ಆರ್ಥಿಕ ನೆರವು: ಪ್ರತ್ಯೇಕತಾವಾದಿಗಳಿಗೆ ಸಮನ್ಸ್ ಜಾರಿ ಮಾಡಿದ ಎನ್ಐಎ
ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಲು ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನ ಆರ್ಥಿಕ ನೆರವು ನೀಡುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾಗುವಂದೆ ಪ್ರತ್ಯೇಕತಾವಾದಿಗಳಿಗೆ ರಾಷ್ಟ್ರೀಯ ತನಿಖಾ ತಂಡ ಸಮನ್ಸ್ ಜಾರಿ ಮಾಡಿದೆ...
ಶ್ರೀನಗರ: ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಲು ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನ ಆರ್ಥಿಕ ನೆರವು ನೀಡುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾಗುವಂದೆ ಪ್ರತ್ಯೇಕತಾವಾದಿಗಳಿಗೆ ರಾಷ್ಟ್ರೀಯ ತನಿಖಾ ತಂಡ ಸಮನ್ಸ್ ಜಾರಿ ಮಾಡಿದೆ.
ಪ್ರತ್ಯೇಕತಾವಾದಿಗಳ ನಾಯಕರಾದ ಫರೂಖ್ ಅಹ್ಮದ್ ದಾರ್ ಮತ್ತು ಜಾವೆದ್ ಅಹ್ಮದ್ ಬಾಬಾ ಎಂಬುವವರಿಗೆ ರಾಷ್ಟ್ರೀಯ ತನಿಖಾ ದಳ ಸಮನ್ಸ್ ಜಾರಿ ಮಾಡಿದ್ದು, ಪ್ರಕರಣ ಸಂಬಂಧ ರಾಜಧಾನಿ ದೆಹಲಿಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ವಿಚಾರಣೆ ವೇಳೆ ಬ್ಯಾಂಕ್ ಖಾತೆ ಕುರಿತ ವಿವರ ಹಾಗೂ ಆಸ್ತಿಪಾಸ್ತಿಗಳ ದಾಖಲೆಗಳನ್ನು ತರುವಂತೆಯೂ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ ರಾಷ್ಟ್ರೀಯ ಸುದ್ದಿವಾಹಿನಿಯೊಂದು ಕುಟುಕು ಕಾರ್ಯಾಚರಣೆಯನ್ನು ನಡೆಸಿತ್ತು. ಈ ವೇಳೆ ಹುರಿಯತ್ ನಾಯಕರೊಬ್ಬರು ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಲು ಹವಾಲಾ ದಂಧೆ ಮೂಲಕ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ನಮಗೆ ಆರ್ಥಿಕ ನೆರವು ನೀಡುತ್ತಿದೆ ಎಂದು ಹೇಳಿಕೊಂಡಿದ್ದರು. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಪ್ರತ್ಯೇಕತಾವಾದಿಗಳಿಗೆ ಸಮನ್ಸ್ ಜಾರಿ ಮಾಡಿದ್ದಾರೆ.