"ನಾಳೆ ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮಕ್ಕೆ ಒಂದು ವರ್ಷವಾಗುತ್ತದೆ. ಭಾರತದ ಅರ್ಥ ವ್ಯವಸ್ಥೆ ಇತಿಹಾಸದಲ್ಲೇ ನವೆಂಬರ್ 8 ಕರಾಳದಿನವಾಗಿದ್ದು, ದೇಶದ ಮಧ್ಯಮ ಮತ್ತು ಸಣ್ಣ ಉದ್ದಿಮೆಗಳ ಬೆನ್ನೆಲುಬನ್ನೇ ಮುರಿದ ದಿನವಾಗಿದೆ. ನಾನು ಈ ಹಿಂದೆ ಸಂಸತ್ತಿನಲ್ಲಿ ಹೇಳಿದಂತೆ ಇದು ಕೇಂದ್ರ ಸರ್ಕಾರದ ಸಂಘಟಿತ ಮತ್ತು ಕಾನೂನುಬಾಹಿರ ಲೂಟಿಯಾಗಿದೆ. ನೋಟು ನಿಷೇಧ ಮತ್ತು ಜಿಎಸ್ ಟಿಯ ಅಸಮರ್ಪಕ ಜಾರಿಯಿಂದಾಗಿ ಇಂದು ದೇಶದ ಸಣ್ಣ ಉದ್ದಿಮೆಗಳು ಭಾರಿ ನಷ್ಟವನ್ನು ಅನುಭವಿಸುತ್ತಿದ್ದು, ಸಣ್ಣ ಉದ್ದಿಮೆಗಳ ಬೆನ್ನೆಲುಬನ್ನೇ ಮುರಿದಂತಾಗಿದೆ. ದೇಶದಲ್ಲಿ ಹುಟ್ಟಿಕೊಂಡಿರುವ ತೆರಿಗೆ ಭಯೋತ್ಪಾದನೆ ದೇಶದ ಸಣ್ಣ ಉದ್ದಿಮೆಗಳ ಧೈರ್ಯವನ್ನೇ ಕಸಿದಿದೆ. ಸರ್ಕಾರದ ಬುಲೆಟ್ ರೈಲು ಯೋಜನೆಯನ್ನು ಯಾರೇ ಪ್ರಶ್ನಿಸಿದರೂ ಅವರು ದೇಶ ವಿರೋಧಿಗಳಾಗುತ್ತಾರೆ ಎಂದು ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.