ಶಶಿಕಲಾಗೆ ಸಂಬಂಧಿಸಿದ ಶೆಲ್ ಕಂಪನಿಗಳ 100 ಬ್ಯಾಂಕ್ ಖಾತೆಗಳು ಸ್ಥಗಿತ!

ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಐಟಿ ಅಧಿಕಾರಿಗಳು ನಡೆಸಿದ ದಾಳಿ ಸತತ ನಾಲ್ಕು ದಿನಗಳ ಬಳಿಕ ಮುಕ್ತಾಯವಾಗಿದ್ದು, ಈ ವೇಳೆ ಶಶಿಕಲಾ ಅವರಿಗೆ ಸಂಬಂಧಿಸಿದ ಶೆಲ್ ಕಂಪನಿಗಳ ಸುಮಾರು 100 ಬ್ಯಾಂಕ್ ಖಾತೆಗಳನ್ನು ಐಟಿ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಐಟಿ ಅಧಿಕಾರಿಗಳು ನಡೆಸಿದ ದಾಳಿ ಸತತ ನಾಲ್ಕು ದಿನಗಳ ಬಳಿಕ ಮುಕ್ತಾಯವಾಗಿದ್ದು, ಈ ವೇಳೆ ಶಶಿಕಲಾ ಅವರಿಗೆ  ಸಂಬಂಧಿಸಿದ ಶೆಲ್ ಕಂಪನಿಗಳ ಸುಮಾರು 100 ಬ್ಯಾಂಕ್ ಖಾತೆಗಳನ್ನು ಐಟಿ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.
ಐಟಿ ದಾಳಿ ನಡೆದ ಸಂದರ್ಭ ಜಯಾ ಟಿವಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ.) ವಿವೇಕ್‌ ಜಯರಾಮನ್‌ ಗೆ ಸೇರಿದ 100 ಬ್ಯಾಂಕ್‌ ಖಾತೆಗಳನ್ನು ಗುರುತಿಸಲಾಗಿದ್ದು, ಅಷ್ಟು ಮಾತ್ರವಲ್ಲದೇ ನೋಟು ನಿಷೇಧ ಬಳಿಕ ಬಹುಕೋಟಿ ರು.  ಮೊತ್ತವನ್ನು ಅವುಗಳಲ್ಲಿ ಠೇವಣಿಯಾಗಿ ಇರಿಸಿದ್ದರ ಬಗ್ಗೆ ಅನುಮಾನಗಳೂ ವ್ಯಕ್ತವಾಗಿವೆ. ಇನ್ನು ವಿವೇಕ್‌ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿ.ಕೆ. ಶಶಿಕಲಾರ ಸೋದರ ಸಂಬಂಧಿಯಾಗಿದ್ದು,  ಅವರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇನ್ನು ಶುಕ್ರವಾರ ನಡೆದಿದ್ದ ದಾಳಿಯಲ್ಲಿ 6 ಕೋಟಿ ರೂ. ನಗದು, 8.5 ಕೆಜಿ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜತೆಗೆ ಕಾಲೇಜೊಂದರ ಹಾಸ್ಟೆಲ್‌ ಕಪಾಟಿನಿಂದ ಬಹುಕೋಟಿ ರೂ. ಮೌಲ್ಯದ  ವಜ್ರಗಳನ್ನೂ ವಶಪಡಿಸಿಕೊಳ್ಳಲಾಗಿತ್ತು. ಅಂತೆಯೇ ಜಯಾ ಟಿವಿ ಎಂ.ಡಿ. ವಿವೇಕ್‌ ಜಯರಾಮನ್‌ 20ಕ್ಕೂ ಅಧಿಕ ಕಂಪೆನಿಗಳ ಹೆಸರಲ್ಲಿ ಬ್ಯಾಂಕ್‌ ಖಾತೆ ಹೊಂದಿರುವುದು ದಾಖಲೆಗಳ ಪರಿಶೀಲನೆ ವೇಳೆ ತಿಳಿದುಬಂದಿದ್ದು, ನೋಟು  ನಿಷೇಧದ ಬಳಿಕ ಕೋಟಿಗಟ್ಟಲೆ ರೂ. ಮೊತ್ತವನ್ನು ಅವುಗಳಲ್ಲಿ ತೊಡಗಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದ್ದು, ದಾಳಿ ಸಂದರ್ಭ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಅಂತೆಯೇ ಶಶಿಕಲಾ ಸಹೋದರಿ ಕೃಷ್ಣ ಪ್ರಿಯಾ ಮತ್ತು ಆಡಿಟರ್‌ ನಿವಾಸಕ್ಕೆ ದಾಳಿ ನಡೆಸಿದ ವೇಳೆ ಇನ್ನೂ ಹಲವು ಮಹತ್ವದ ಕಾಗದಪತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ. ಈ ಖಾತೆಯಲ್ಲಿ ತೊಡಗಿಸಲಾಗಿರುವ ಮೊತ್ತದಿಂದ ಕೋಟಿಗಟ್ಟಲೆ ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಖರೀದಿಗೆ ವಿನಿಯೋಗಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದ್ದು, ಕೊಡನಾಡ್‌ ಎಸ್ಟೇಟ್‌, ಇತರ  ಸ್ಥಳಗಳಲ್ಲಿ ಭಾನುವಾರವೂ ಶೋಧಕಾರ್ಯ ಮುಂದುವರಿದಿತ್ತು.
ದಾಳಿ ಮುಕ್ತಾಯ, ವಿ.ಕೆ. ಶಶಿಕಲಾ ಮತ್ತು ಇತರರ ವಿರುದ್ಧ ಯಾವುದೇ ಸಂಚು ನಡೆದಿಲ್ಲ 
ಇನ್ನು ಪ್ರಸ್ತುತ ದಾಳಿ ಮುಕ್ತಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ದಾಳಿ ವೇಳೆ ದೊರೆತ ಕಾಗದ ಪತ್ರಗಳ ಪರಿಶೀಲನೆ ನಡೆಯಬೇಕಿದೆ. ಅಂತೆಯೇ ಅದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ ಪ್ರಕ್ರಿಯೆ ಮಾತ್ರ ಬಾಕಿ  ಉಳಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ ಐಟಿ ದಾಳಿ ರಾಜಕೀಯ ಪ್ರೇರಿತವಲ್ಲ ಎಂದು ಸ್ಪಷ್ಟ ಪಡಿಸಿರುವ ಅಧಿಕಾರಿಗಳು, ದಾಳಿ ನಡೆಸಿದ್ದರಲ್ಲಿ ಯಾವ ಸಂಚೂ ಇಲ್ಲ. ಸೂಕ್ತ ಮಾಹಿತಿ ಮತ್ತು ದಾಖಲೆಗಳ  ಆಧಾರದಲ್ಲಿಯೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com