ಐಟಿ ದಾಳಿ: ಶಶಿಕಲಾಗೆ ಸಂಬಂಧಿಸಿದ 1400 ಕೋಟಿ ಮೌಲ್ಯದ ದಾಖಲೆ ರಹಿತ ಆಸ್ತಿ ಪತ್ತೆ!

ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾ ಅವರಿಗೆ ಸಂಬಂಧಿಸಿದ ಸುಮಾರು 1400 ಕೋಟಿ ರು. ಮೌಲ್ಯದ ದಾಖಲೆ ರಹಿತ ಆದಾಯ ಪತ್ತೆಯಾಗಿದೆ ಎಂದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾ ಅವರಿಗೆ ಸಂಬಂಧಿಸಿದ ಸುಮಾರು 1400 ಕೋಟಿ ರು. ಮೌಲ್ಯದ ದಾಖಲೆ ರಹಿತ ಆದಾಯ ಪತ್ತೆಯಾಗಿದೆ ಎಂದು ಆದಾಯ ತೆರಿಗೆ  ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಶಿಕಲಾ ಅವರಿಗೆ ಸೇರಿದ ಜಯಾ ಟಿವಿ, ಜ್ಯಾಝ್ ಮೂವೀಸ್ ವಾಹಿನಿ ಕಚೇರಿ ಚೆನ್ನೈನಲ್ಲಿರುವ ಪೋಯಸ್ ಗಾರ್ಡನ್ ಸೇರಿದಂತೆ ದೇಶದ ವಿವಿಧ 40  ಪ್ರದೇಶಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು,  ಸತತ ಮೂರು ದಿನಗಳ ಕಾಲ ಶೋಧ ನಡೆಸಿದ್ದರು. ಈ ವೇಳೆ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿದ್ದವು. ಇದೀಗ ಈ ದಾಖಲೆಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ  ಅಧಿಕಾರಿಗಳು, ಶಶಿಕಲಾ ಮತ್ತು ಅವರ ಆಪ್ತರ ಮನೆ, ಕಚೇರಿಗಳಲ್ಲಿ ಒಟ್ಟು 1400 ಕೋಟಿ ಮೌಲ್ಯದ ದಾಖಲೆ ರಹಿತ ಆದಾಯ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ವಶಪಡಿಸಿಕೊಂಡ ವಸ್ತುಗಳಲ್ಲಿ ರೂ.7 ಕೋಟಿ ನಗದು, ಐದು ಕೋಟಿ ಮೌಲ್ಯದ ಚಿನ್ನ ಹಾಗೂ ಭಾರೀ ವಜ್ರಾಭರಣಗಳು ಸೇರಿವೆ. ಈ ಬೆಲೆಬಾಳುವ ವಜ್ರಾಭರಣಗಳ ಮೌಲ್ಯವನ್ನು ಅಂದಾಜಿಸುವ ಕಾರ್ಯಕ್ಕಾಗಿ ವಜ್ರ ಮೌಲ್ಯಮಾಪಕರನ್ನು ಕರೆಸಲಾಗಿದೆ.  ಶಶಿಕಲಾ ಕುಟುಂಬಸ್ಥರು ಆರಂಭಿಸಿರುವ ಹಲವಾರು ಬೇನಾಮಿ ಕಂಪೆನಿಗಳನ್ನೂ ಪತ್ತೆ ಹಚ್ಚಲಾಗಿದೆ ಹಾಗೂ ನೂರಾರು ಶಂಕಾಸ್ಪದ ದಾಖಲೆಗಳೂ ಐಟಿ ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ.
ತೆರಿಗೆ ವಂಚನೆ ಆರೋಪದ ಮೇರೆಗೆ ಶಶಿಕಲಾ ಆಪ್ತ ಮತ್ತು ಜಯಾ ಟಿವಿ ನಿರ್ವಾಹಕ ನಿರ್ದೇಶಕ ವಿವೇಕ್ ಜಯರಾಮನ್, ಶಶಿಕಲಾ ಸಹೋದರಿ ಕೃಷ್ಣ ಪ್ರಿಯಾ ವಿವೇಕ್, ಟಿಟಿವಿ ದಿನಕರನ್ ಗೆ ಸಂಬಂಧಿಸಿದ ಮನೆ ಮತ್ತು  ಕಚೇರಿಗಳು ಹಾಗೂ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸ ಸೇರಿದಂತೆ ಒಟ್ಟು 40 ಪ್ರದೇಶಗಳಲ್ಲಿ ಐಟಿ ಆಧಿಕಾರಿಗಳು ದಾಳಿ ನಡೆಸಿದ್ದರು. ಅಂತೆಯೇ ಶಶಿಕಲಾ ಅವರ ಬೆಂಬಲಿಗ ಮುಖಂಡರಾದ ಕರ್ನಾಟಕ  ಎಐಎಡಿಎಂಕೆ ವಿಭಾಗದ ಮುಖ್ಯಸ್ಥೆ ಪುಗಳೆಂದಿ ಅವರ ದೊಮ್ಮಲೂರಿನಲ್ಲಿರುವ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಲ್ಲದೆ ಶಶಿಕಲಾ ಅವರ ಸಹೋದರ ಸಂಬಂಧಿಗಳು, ಆಪ್ತರ ದೆಹಲಿ, ಹರ್ಯಾಣ  ಕಚೇರಿಗಳಲ್ಲೂ ಅದಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಇನ್ನು ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಟಿಟಿವಿ ದಿನಕರನ್ ಇದು ರಾಜಕೀಯ ಪ್ರೇರಿತ ದಾಳಿಯಾಗಿದ್ದು, ಇದರಿಂದ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com