ಕೇರಳ ಲವ್ ಜಿಹಾದ್ ಪ್ರಕರಣ: 90 ಅಂತರ್ ಜಾತಿ ವಿವಾಹಗಳ ಮೇಲೆ ಎನ್ಐಎ ಕಣ್ಣು
ಕೇರಳ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಎನ್ನಲಾಗುತ್ತಿರುವ ಲವ್ ಜಿಹಾದ್ ಕುರಿತಂತೆ ಸುಪ್ರೀಂಕೋರ್ಟ್ ತನಿಖೆಗೆ ಆದೇಶ ಹೊರಡಿಸಿರುವ ಬೆನ್ನಲ್ಲೇ ರಾಷ್ಟ್ರೀಯ ತನಿಖಾ ದಳ ಕಾರ್ಯಪ್ರವೃತ್ತಗೊಂಡಿದೆ...
ನವದೆಹಲಿ: ಕೇರಳದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಎನ್ನಲಾಗುತ್ತಿರುವ ಲವ್ ಜಿಹಾದ್ ಕುರಿತಂತೆ ಸುಪ್ರೀಂಕೋರ್ಟ್ ತನಿಖೆಗೆ ಆದೇಶ ಹೊರಡಿಸಿರುವ ಬೆನ್ನಲ್ಲೇ ರಾಷ್ಟ್ರೀಯ ತನಿಖಾ ದಳ ಕಾರ್ಯಪ್ರವೃತ್ತಗೊಂಡಿದೆ.
2015ರಿಂದ ಕೇರಳ ರಾಜ್ಯದಲ್ಲಿ 90 ಅಂತರ್ ಧರ್ಮೀಯ ವಿವಾಹಗಳು ನಡೆದಿದ್ದು, ಅದರ ಹಿಂದೆ ಬಲವಂತ ಅಥವಾ ಷಡ್ಯಂತ್ರ ಅರ್ಥಾತ್ ಲವ್ ಜಿಹಾದ್ ನಡೆದಿದೆಯೇ ಎಂಬುದನ್ನು ಪತ್ತೆ ಹಚ್ಚಲು ಎನ್ಐಎ ಮುಂದಾಗಿದೆ.
ಹಿಂದು, ಕ್ರೈಸ್ತ, ಮುಸಲ್ಮಾನರ 90 ಅಂತರ್ ಧರ್ಮೀಯ ವಿವಾಹಗಳ ಪಟ್ಟಿಯನ್ನು ಈಗಾಗಲೇ ಕೇರಳ ಪೊಲೀಸರು ಎನ್ಐಎ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಕೇರಳದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಲವ್ ಜಿಹಾದ್ ನಡೆಯುತ್ತಿದ್ದು, ಹಿಂದು ಯುವತಿಯರನ್ನು ಇಸ್ಲಾಂಗೆ ಮತಾಂತರಗೊಳಿಸಿ ಬಳಿಕ ಮುಸ್ಲಿಂ ಯುವಕರು ವಿವಾಹವಾಗುತ್ತಿದ್ದಾರೆಂಬ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಸಂಬಂಧ ಸುಪ್ರೀಂಕೋರ್ಟ್ ತನಿಖೆಗೆ ಆದೇಶಿಸಿತ್ತು.