ದೀರ್ಘಕಾಲದಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ಪಾಕಿಸ್ತಾನದ ನಸೀಂ ಅಖ್ತರ್ ಎಂಬ ಮಹಿಳೆ ಮತ್ತು ಶಬ್ಬೀರ್ ಅಹ್ಮದ್ ಶಾ ಎಂಬ ಅನಾರೋಗ್ಯ ಪೀಡಿತ ವ್ಯಕ್ತಿಗೆ ಭಾರತದ ವೈದ್ಯಕೀಯ ವೀಸಾ ನೀಡಲಾಗಿದೆ. ಇಸ್ಲಾಮಾಬಾದ್ ನಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ಮೂಲಗಳ ಪ್ರಕಾರ ದೀರ್ಘಕಾಲದಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ಪಾಕಿಸ್ತಾನದ ನಸೀಂ ಅಖ್ತರ್ ಮಹಿಳೆ ಭಾರತದಲ್ಲಿ ಚಿಕಿತ್ಸೆ ಪಡೆಯಲು ವೀಸಾಗಾಗಿ ಆರ್ಜಿ ಸಲ್ಲಿಸಿದ್ದರು. ಪ್ರಸ್ತುತ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧ ಹಳಿಸಿದ್ದರಿಂದ ಪಾಕಿಸ್ತಾನದ ಅಧಿಕಾರಿಗಳೇ ವಿಸಾ ದೊರೆಯುವ ಕುರಿತು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಾನವೀಯ ನೆಲೆಗಟ್ಟಿನಲ್ಲಿ ನಸೀಂ ಅಖ್ತರ್ ಅವರು ಭಾರತಕ್ಕೆ ಬಂದು ಶಸ್ತ್ರ ಚಿಕಿತ್ಸೆಗೆ ಒಳಗಾಗಲು ವೈದ್ಯಕೀಯ ವೀಸಾ ನೀಡಲು ನಿರ್ಧರಿಸಿದ್ದಾರೆ.
ಅಂತೆಯೇ ಲಿವರ್ ಕಸಿ ಶಸ್ತ್ರ ಚಿಕಿತ್ಸೆಗಾಗಿ ವೀಸಾ ನೆರವು ಕೋರಿದ್ದ ಮತ್ತೋರ್ವ ಪಾಕಿಸ್ತಾನ ಪ್ರಜೆ ಶಬ್ಬೀರ್ ಅಹ್ಮದ್ ಶಾ ಅವರಿಗೂ ವೀಸಾ ನೀಡುವುದಾಗಿ ವಿದೇಶಾಂಗ ಇಲಾಖೆ ಹೇಳಿದೆ. ಈ ಬಗ್ಗೆ ಸ್ವತಃ ಸುಷ್ಮಾ ಸ್ವರಾಜ್ ಅವರೇ ಟ್ವೀಟ್ ಮಾಡಿದ್ದು, ವೀಸಾ ನೀಡುವುದಾಗಿ ಹೇಳಿದ್ದಾರೆ.