ಇದೇ ನವೆಂಬರ್ 4ರಂದು ಗುರುನಾನಕ್ ಜಯಂತಿ ಇರುವ ಕಾರಣ, ಗುರುನಾನಕ್ ರ ನೆನೆದ ಪ್ರಧಾನಿ ಮೋದಿ, ಮಾನವೀಯತೆ ಮೌಲ್ಯವನ್ನು ಜನರಿಗೆ ತಿಳಿಸಲಿಕ್ಕಾಗಿ ಗುರುನಾನಕ್ ದೇವ್ ಜೀ ಅವರು 28 ಸಾವಿರ ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದರು. ಹಸಿದವರಿಗಾಗಿ ಉಚಿತ ದಾಸೋಹಕ್ಕಾಗಿ ಲಂಗರ್ ಗಳನ್ನು ತೆರೆದಿದ್ದರು. ಇದು ಸೇವಾ ಮನೋಭಾವವನ್ನು ಪಸರಿಸುತ್ತಿದೆ ಎಂದು ಹೇಳಿದರು. ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ನೆನದ ಮೋದಿ, ಆಧುನಿಕ, ಏಕೀಕೃತ ಭಾರತಕ್ಕೆ ಅಡಿಗಲ್ಲು ಹಾಕಿದ್ದೇ ಸರ್ದಾರ್ ವಲ್ಲಭಬಾಯಿ ಪಟೇಲ್ ಎಂದು ಬಣ್ಣಿಸಿದರು. ಅಂತೆಯೇ ಅಕ್ಟೋಬರ್ 31ರಂದು ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆ ನಿಮಿತ್ತ ರನ್ ಫಾರ್ ಯೂನಿಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ದೇಶದ ಎಲ್ಲ ಜನರೂ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿ ಮನವಿ ಮಾಡಿದರು.