ಚೆನ್ನೈ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ವಿರುದ್ಧ ಕಾನೂನು ಹೋರಾಟ ನಡೆಸಿ ದಲಿತ ವಿದ್ಯಾರ್ಥಿನಿ ಅನಿತಾ(18) ಆತ್ಮಹತ್ಯೆ ಮಾಡಿಕೊಂಡ ನಂತರ ನೀಟ್ ವಿರುದ್ಧ ಹೋರಾಟ ತೀವ್ರಗೊಳಿಸಿರುವ ಪ್ರತಿಪಕ್ಷ ಡಿಎಂಕೆ ಎರಡನೇ ದಿನವಾದ ಭಾನುವಾರವೂ ಪ್ರತಿಭಟನೆ ಮುಂದುವರೆಸಿದೆ.
ಇನ್ನು ಪ್ರತಿಭಟನೆಗೆ ತಮಿಳುಪರ ಸಂಘಟನೆಗಳು ಸಾಥ್ ನೀಡಿದ್ದು, ಬಿಜೆಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವೈದ್ಯಕೀಯ ಸೀಟು ದೊರೆಯದ ಕಾರಣ ತೀವ್ರ ನಿರಾಸೆಗೊಂಡಿದ್ದ ದಲಿತ ಕುಟುಂಬದ ಅನಿತಾ ಕಳೆದ ಶುಕ್ರವಾರ ಅರಿಯಲೂರ್ ಜಿಲ್ಲೆಯ ಕುಲುಮುರ್ ತಾಲ್ಲೂಕಿನ ಕುಜುಮುರ್ ಗ್ರಾಮದ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ನಿನ್ನೆ ಯುವತಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು, ಮೃತಳ ಕುಟುಂಬಕ್ಕೆ ಪಕ್ಷದ ವತಿಯಿಂದ 10 ಲಕ್ಷ ರುಪಾಯಿ ಪರಿಹಾರ ನೀಡಿದ್ದಾರೆ.
ನೀಟ್’ನಿಂದ ತಮಿಳುನಾಡಿಗೆ ವಿನಾಯಿತಿ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅನಿತಾ ಅರ್ಜಿ ಸಲ್ಲಿಸಿದ್ದರು. ಆದರೆ, ವಿನಾಯಿತಿ ದೊರೆಯುವುದಿಲ್ಲ ಎಂದು ಖಚಿತವಾದ ಬಳಿಕ ತೀವ್ರ ಬೇಸರಗೊಂಡಿದ್ದರು.
ದಲಿತ ಕುಟುಂಬಕ್ಕೆ ಸೇರಿರುವ ಅನಿತಾ ತಂದೆ ದಿನಗೂಲಿ ಕಾರ್ಮಿಕರು. ವೈದ್ಯೆಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದ ಅನಿತಾ ಪಿಯು ದ್ವಿತೀಯ ಪರೀಕ್ಷೆಯಲ್ಲಿ 1,200ಕ್ಕೆ 1,176 ಅಂಕಗಳನ್ನು ಗಳಿಸಿದ್ದರು. ಆದರೆ, ‘ನೀಟ್’ನಲ್ಲಿ ಅನಿತಾ ಕೇವಲ 86 ಅಂಕಗಳನ್ನು ಮಾತ್ರ ಗಳಿಸಿದ್ದರಿಂದ ವೈದ್ಯಕೀಯ ಸೀಟು ದೊರೆಯಲಿಲ್ಲ.