ಸುಪ್ರಿಯಾ ಸುಳೆಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ: ಶಿವಸೇನೆ ಹೇಳಿಕೆ!

ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡುವ ಕುರಿತು ಭರವಸೆ ನೀಡಿದ್ದರು ಎಂದು ಶಿವಸೇನೆ ಹೇಳಿದೆ.
ಶರದ್ ಪವಾರ್ ಪುತ್ರಿ ಸುಪ್ರಿಯಾ
ಶರದ್ ಪವಾರ್ ಪುತ್ರಿ ಸುಪ್ರಿಯಾ
ಮುಂಬೈ: ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡುವ ಕುರಿತು ಭರವಸೆ ನೀಡಿದ್ದರು ಎಂದು ಶಿವಸೇನೆ ಹೇಳಿದೆ.
ಈ ಬಗ್ಗೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಶಿವಸೇನೆ, ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸ್ಥಾನ ನೀಡುವ ಆಶ್ವಾಸನೆ ನೀಡಿದ್ದರು ಎಂದು ಬರೆದಿದೆ. ಕಾಂಗ್ರೆಸ್  ನೇತೃತ್ವದ ಯುಪಿಎ ಮೈತ್ರಿಕೂಟ ಪ್ರಮುಖ ಪಕ್ಷವಾಗಿರುವ ಎನ್ ಸಿಪಿಯನ್ನು ತನ್ನತ್ತ ಸೆಳೆಯಲು ಪ್ರಧಾನಿ ಮೋದಿ ಯತ್ನಿಸಿದ್ದು, ಇದೇ ಕಾರಣಕ್ಕೆ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರಿಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದರು ಎಂದು  ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.
ಆ ಮೂಲಕ ಮೋದಿ ಸರ್ಕಾರದ ಮೇಲೆ ಮತ್ತೆ ವಾಗ್ದಾಳಿ ನಡೆಸಿರುವ ಶಿವಸೇನೆ, ಸಾಮ್ನಾದಲ್ಲಿ ಈ ಬಗ್ಗೆ ಸಂಪಾದಕೀಯ ಪ್ರಕಟಿಸಿದೆ. ಭಾನುವಾರ ಈ ಕುರಿತ ಲೇಖನ ಪ್ರಕಟವಾಗಿದೆ. ಸಂಸದ ಹಾಗೂ ಅಂಕಣಕಾರ ಸಂಜಯ್ ರಾವುತ್ ಈ ವಿಷಯವನ್ನು ಬಹಿರಂಗಪಡಿಸಿದ್ದು, "ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಎನ್‌ಸಿಪಿ ಸೇರ್ಪಡೆಯಾಗುತ್ತದೆ ಎಂಬ ವದಂತಿ ಬಗ್ಗೆ ಸ್ಪಷ್ಟನೆ ಪಡೆಯಲು ಪವಾರ್ ಅವರನ್ನು ಭೇಟಿ ಮಾಡಿದಾಗ ಈ ವಿಷಯವನ್ನು ಸ್ವತಃ ಪವಾರ್ ಅವರೇ ತಿಳಿಸಿದ್ದಾರೆ ಎಂದು ರಾವುತ್ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಈ ಕುರಿತು ಬಂದಿರುವ ವರದಿಗಳು ಸುಳ್ಳು, ಬಿಜೆಪಿ ಜತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಮೋದಿ ಜತೆಗಿನ ಮಾತುಕತೆಯಲ್ಲಿ ಸ್ಪಷ್ಟಪಡಿಸಿದ್ದಾಗಿ ಪವಾರ್ ಹೇಳಿದ್ದಾಗಿ ರಾವುತ್ ವಿವರಿಸಿದ್ದಾರೆ. ಪವಾರ್ ಏನೇ ಹೇಳಿದರೂ, ಎನ್‌ಸಿಪಿ ರಾಜ್ಯ ಮುಖಂಡರು ಬಿಜೆಪಿ ಜತೆ ನಂಟು ಹೊಂದಿದ್ದಾರೆ ಎಂದು ಲೇಖನ ಆಪಾದಿಸಿದೆ. ಆದರೆ ಸುಪ್ರಿಯಾ ಸುಳೆ ಅಥವಾ ಪವಾರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಾಮ್ನಾದಲ್ಲಿ ಈ ಲೇಖನ ಪ್ರಕಟವಾದ ದಿನವೇ ಅರುಣ್ ಜೇಟ್ಲೆ ಹಾಗೂ ಸಿಎಂ ದೇವೇಂದ್ರ ಫಡ್ನವೀಸ್ ಅವರು ಪುಣೆಯಲ್ಲಿ ಶರದ್ ಪವಾರ್ ಜತೆ ಸಮಾರಂಭವೊಂದರಲ್ಲಿ ಭಾಗವಹಿಸಿರುವುದು ಬಿಜೆಪಿ-ಎನ್‌ಸಿಪಿ ಸಖ್ಯ ಕುರಿತ ವದಂತಿಗೆ ಪುಷ್ಟಿ ನೀಡಿತ್ತು. ಭಾನುವಾರದ ಈ ಸಮಾರಂಭದಲ್ಲಿ ಜೇಟ್ಲಿ ಶರದ್ ಪವಾರ್ ಅವರ ಗುಣಗಾನ ಮಾಡಿ, "ನಾನು ಎಂದೂ ಪವಾರ್ ಅವರಿಂದ ಋಣಾತ್ಮಕ ಹೇಳಿಕೆ ನೋಡಿಲ್ಲ. ಹಲವು ವರ್ಷಗಳಿಂದ ನಾನು ಅವರನ್ನು ಬಲ್ಲೆ. ದೇಶದ ಹಿತಾಸಕ್ತಿ ವಿಚಾರ ಬಂದಾಗ, ಪವಾರ್ ಎಲ್ಲ ರಾಜಕೀಯವನ್ನೂ ಮೀರಿ ನಿರ್ಧಾರ ಕೈಗೊಂಡಿದ್ದಾರೆ" ಎಂದು ಶ್ಲಾಘಿಸಿದ್ದರು.
ಈ ಹಿಂದೆ ಕೇಂದ್ರ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ತನ್ನ ಪಕ್ಷದ ಅಂದರೆ ಶಿವಸೇನೆಯ ಸಂಸದರನ್ನು ಪರಿಗಣನೆಗೆ ತೆಗೆದುಕೊಳ್ಳದೇ ಶಿವಸೇನೆಯ ಸಂಸದರಿಗೆ ಸಚಿವ ಸ್ಥಾನ ನೀಡಲಿಲ್ಲ ಎಂದು ಶಿವಸೇನೆ ಕಿಡಿಕಾರಿತ್ತು.  ಅಲ್ಲದೆ ಪ್ರಧಾನಿ ಮೋದಿ ಸಂಪುಟ ವಿಸ್ತರಣೆಯನ್ನು ಬಿಜೆಪಿ ಸಂಪುಟ ವಿಸ್ತರಣೆ ಎಂದು ಕಿಡಿಕಾರಿತ್ತು.  ಇದೀಗ ಎನ್ ಸಿಪಿ ನಾಯಕರಾದ ಸುಪ್ರಿಯಾ ಸುಳೆ ಅವರನ್ನು ತನ್ನತ್ತ ಸೆಳೆಯುತ್ತಿದೆ ಎಂದು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com