ಗಲ್ಫ್ ರಾಷ್ಟ್ರಗಳ ಶೇಖ್ ಗಳೊಂದಿಗೆ ವಿವಾಹ ಜಾಲ ಪತ್ತೆ ಹಚ್ಚಿದ ಪೊಲೀಸರು: 20 ಮಂದಿ ಬಂಧನ

ಮದುವೆ ಹೆಸರಿನಲ್ಲಿ ಹೆಣ್ಣು ಮಕ್ಕಳ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿರುವ ಹೈದರಾಬಾದ್ ಪೊಲೀಸರು 20 ಮಂದಿಯನ್ನು ವಶಕ್ಕೆ ...
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು
ಹೈದರಾಬಾದ್ : ಮದುವೆ ಹೆಸರಿನಲ್ಲಿ ಹೆಣ್ಣು ಮಕ್ಕಳ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿರುವ ಹೈದರಾಬಾದ್ ಪೊಲೀಸರು 20 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಓಮಾನಿ ಶೇಕ್ ಎಂಬಾತನೊಂದಿಗೆ ವಿವಾಹ ಮಾಡಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಐವರು ಓಮಾನಿ ಮತ್ತು ಮೂವರು ಖತಾರಿ ಶೇಕ್ ಗಳು, ಮೂವರು ಖಾಜಿಗಳು, ನಾಲ್ಕು ಮಂದಿ ಲಾಡ್ಜ್ ಮಾಲೀಕರು, ಹಾಗೂ ಐವರು ಮ್ಯಾರೇಜ್ ಬ್ರೋಕರ್ ಗಳನ್ನು ಬಂಧಿಸಿದ್ದಾರೆ. ಭಾನುವಾರ ಮುಂಬಯಿಯಲ್ಲಿ  ಫರೀದ್ ಅಹ್ಮದ್ ಖಾನ್ ಎಂಬ ಖಾಜಿಗಳ ಮುಖ್ಯಸ್ಥನನ್ನು ಪೊಲೀಸರು ಬಂಧಿಸಿದ್ದರು. 
ಬಡಕುಟುಂಬದ ಹೆಣ್ಣುಮಕ್ಕಳಿಗೆ ದುಡ್ಡಿನ ಆಮಿಷ ತೋರಿಸಿ ನಂತರ ಖಾಜಿಗಳ ಸಹಾಯದೊಂದಿಗೆ ವಿವಾಹ ನಡೆಸುತ್ತವೆ. ವಿವಾಹದ ಸಂದರ್ಭದಲ್ಲಿಯೇ ‘ತಲಾಖ್’ನ ಖಾಲಿ ಹಾಳೆಗಳಿಗೆ ಮಹಿಳೆ/ಬಾಲಕಿಯ ಬಳಿ ಸಹಿ ಹಾಕಿಸಿಕೊಳ್ಳಲಾಗುತ್ತದೆ. ನಂತರ ಇವರನ್ನು ವಿದೇಶಿಗರಿಗೆ ಮಾರಾಟ ಮಾಡಲಾಗುತ್ತದೆ. 
ಇದಕ್ಕಾಗಿ ಅರಬ್  ಜನ 3 ರಿಂದ 10 ಲಕ್ಷ ರು ಖರ್ಚು ಮಾಡುತ್ತಾರೆ, ಇದರಲ್ಲಿ ಹೆಚ್ಚಿನ ಹಣ ಬ್ರೋಕರ್ ಗಳಿಗೆ ಮತ್ತು ಖಾಜಿಗಳಿಗೆ ಸೇರುತ್ತದೆ. ವಿವಾಹವಾಗುವ ಹೆಣ್ಣು ಮಗಳ ಕುಟುಂಬಕ್ಕೆ ಕೇವಲ ಸ್ವಲ್ಪ ಹಣ ಮಾತ್ರ ಸಿಗುತ್ತದೆ ಎಂದು ದಕ್ಷಿಣ ವಲಯದ ಡಿಸಿಪಿ ಸತ್ಯನಾರಾಯಣ ರಾವ್ ಹೇಳಿದ್ದಾರೆ. ಹೈದಾರಾಬಾದ್ ನಂತ ಈ ಜಾಲ ಹರಡಿದ್ದು,  ಶಂಕಿತ 48 ಮಂದಿ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.  
ಒಪ್ಪಂದದ ವಿವಾಹದ ಮೂಲಕ ಇವರು ಕನಿಷ್ಠ 20 ಮಹಿಳೆಯರು ಹಾಗೂ ಬಾಲಕಿಯರನ್ನು ಮಾರಾಟ ಮಾಡಲು ಸಂಚು ರೂಪಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com