ನವದೆಹಲಿ: ದೇಶದ ಆರ್ಥಿಕ ಸ್ಥಿತಿಯಲ್ಲಿ ಜನರು ಕುಸಿಯುತ್ತಿದ್ದಾರೆ ಎಂದು ಕೇಂದ್ರ ಹಾಗೂ ಹಣಕಾಸು ಸಚಿವ ಅರುಣ್ ಜೈಟ್ಲಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರ ಹೇಳಿಕೆಗೆ ಬಾಲಿವುಡ್ ನಟ ಹಾಗೂ ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಬೆಂಬಲ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು ನಾಗರಿಕರ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಉತ್ತರಿಸಬೇಕಾದ ಸಮಯ ಇದಾಗಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದ ಅಧಿನಾಯಕ ಹಾಗೂ ಗೌರವಾನ್ವಿತ ಪ್ರಧಾನ ಮಂತ್ರಿಗಳು ಮುಂದೆ ಬಂದು ದೇಶದ ನಾದರಿಕರ ಪ್ರಶ್ನೆಗಳಿಗೆ ನೈಜ ಸುದ್ದಿಗೋಷ್ಠಿಯಲ್ಲಿ ಉತ್ತರಿಸಲು ಸರಿಯಾದ ಸಮಯ ಇದಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ಪ್ರಧಾನಿಗಳು ಆರ್ಥಿಕತೆ ಬಗ್ಗೆ ಯೋಚನೆ ಮಾಡುವುದಾದರೆ ಗುಜರಾತ್‍ನಲ್ಲಿ ಬರುವ ಮುಂದಿನ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮಧ್ಯಮ ವರ್ಗ, ಸಣ್ಣ ವ್ಯಾಪಾರಿಗಳತ್ತ ಗಮನ ಹರಿಸಲಿ ಎಂದು ಟ್ವೀಟ್ ಮಾಡಿದ್ದಾರೆ.
ಯಶವಂತ್ ಸಿನ್ಹಾ ಉತ್ತಮ ರಾಜಕಾರಣಿಯಾಗಿದ್ದು, ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರು ಬುದ್ಧಿವಂತ ರಾಜಕಾರಣಿ ಎಂಬುದಕ್ಕೆ ಹಲವಾರು ಬಾರಿ ಸಾಬೀತಾಗಿದೆ ಎಂದು ಹೊಗಳಿದ್ದಾರೆ.
ದೇಶದ ಆರ್ಥಿಕ ವಿಚಾರವೂ ಸಿನ್ಹಾ ಮತ್ತು ಕೇಂದ್ರ ಸರ್ಕಾರಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಇಡೀ ದೇಶಕ್ಕೆ ಸಂಬಂಧಪಡುತ್ತದೆ. ಹೀಗಾಗಿ ಪ್ರಧಾನಿ ಜನರೆದುರು ಉತ್ತರ ನೀಡುವ ಕಾಲ ಒದಗಿ ಬಂದಿದೆ ಎಂದು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.