ನವದೆಹಲಿ: ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಆಪ್ತನಾಗಿದ್ದ ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಗೆ ಸೇರಿದ ಹಬೀಬುರ್ ರಹ್ಮಾನ್ ನನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬಂಧಿಸಿದೆ.
ನಿನ್ನೆ ರಾತ್ರಿ ಸೌದಿ ಅರೇಬಿಯಾದಿಂದ ಬರುತ್ತಿದ್ದ ಉಗ್ರ ಹಬೀಬುರ್ ನನ್ನು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದು, ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಎನ್ಐಎ ಸೋಮವಾರ ತಿಳಿಸಿದೆ.
ಹಬೀಬುರ್ ನನ್ನು ಸೌದಿ ಅರೇಬಿಯಾದಿಂದ ಗಡಿಪಾರು ಮಾಡಲಾಗಿತ್ತು. ಭಾನುವಾರ ಹಬೀಬುರ್ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಆತನನ್ನು ಬಂಧಿಸಲಾಗಿದೆ.
2007ರಲ್ಲಿ ಬಂಧಿತನಾದ ಲಷ್ಕರ್ ಉಗ್ರ ಶೇಖ್ ಅಬ್ದುಲ್ ನಯೀಮ್ ಹಾಗೂ ಆತನ ಸಹಚರರನ್ನು ಹಬೀಬುರ್ ನಿಯಂತ್ರಿಸುತ್ತಿದ್ದ ಎನ್ನಲಾಗಿದೆ.
ಒಬ್ಬ ಕಾಶ್ಮೀರಿ ಮೂಲದ ಉಗ್ರ ಹಾಗೂ ಇಬ್ಬರು ಪಾಕಿಸ್ತಾನಿಗಳನ್ನು ಬಾಂಗ್ಲಾದೇಶದ ಗಡಿ ಮೂಲಕ ಭಾರತದ ಗಡಿಯೊಳಗೆ ಸೇರಿಸಲು ಯತ್ನಿಸಿದ್ದ ವೇಳೆ ಶೇಖ್ ಅಬ್ದುಲ್ ನಯೀಮ್ ನನ್ನು ಬಂಧಿಸಲಾಗಿತ್ತು.