ಜಬಲಪುರ್: ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ಕಾಮುಕನಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ಕೇಳ ನ್ಯಾಯಾಲಯದ ತೀರ್ಪನ್ನು ಮಧ್ಯ ಪ್ರದೇಶ ಹೈಕೋರ್ಟ್ ಗುರುವಾರ ಎತ್ತಿ ಹಿಡಿದಿದೆ.
ತನ್ನ ಗಲ್ಲು ಶಿಕ್ಷೆ ಪ್ರಶ್ನಿಸಿ ರಾಹುಲ್ ಚೌಹ್ತಾ(23) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಇಂತಹ ಅಪರಾಧಿಗಳಿಂದಾಗಿ ಮಾನವೀಯತೆ ಅಪಾಯದಲ್ಲಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಇದು ಅತ್ಯಂತ ಹೀನ ಕೃತ್ಯ ಎಂದಿದೆ.
ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕೋರ್ಟ್, ಇಂತಹ ಪ್ರಕರಣಗಳಲ್ಲಿ ಕಾಮುಕರಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಹೇಳಿದೆ.
ಕಳೆದ ವರ್ಷ ಮೇ 13ರಂದು ಮಧ್ಯ ಪ್ರದೇಶದ ಶಾಹ್ದೊಲ್ ಜಿಲ್ಲೆಯಲ್ಲಿ ಕಾಮುಕ ರಾಹುಲ್, ಬಾಲಕಿಗೆ ಬಿಸ್ಕಿಟ್ ನೀಡಿ ಪುಸುಲಾಯಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಿದ್ದ.
ಪ್ರಕರಣದ ವಿಚಾರಣೆ ನಡೆಸಿದ್ದ ಶಾಹ್ದೊಲ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್ ಕೆ ಸಿಂಗ್ ಅವರು, ಫೆಬ್ರವರಿ 28ರಂದು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು.