ದೇಶ

ದೆಹಲಿ: ನಾಳಿನ ಸ್ವಾತಂತ್ರ್ಯ ದಿನಾಚರಣೆಗಾಗೆ ಬಿಗಿ ಭದ್ರತೆ, 70 ಸಾವಿರ ಪೊಲೀಸರ ನಿಯೋಜನೆ

ದೆಹಲಿ: ನಾಳಿನ ಸ್ವಾತಂತ್ರ್ಯ ದಿನಾಚರಣೆಗಾಗೆ ಬಿಗಿ ಭದ್ರತೆ, 70 ಸಾವಿರ ಪೊಲೀಸರ ನಿಯೋಜನೆ
ಪ್ರಧಾನಿ ನರೇಂದ್ರಮೋದಿ
Published On :

ನವದೆಹಲಿ: ನಾಳಿನ 72 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರಮೋದಿ ಐತಿಹಾಸಿಕ ಕೆಂಪು ಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಎಲ್ಲೆಲ್ಲೂ ಖಾಕಿ ಪಡೆಯೇ ಕಂಡುಬರುತ್ತಿದೆ.

ಜೆಎನ್ ಯು ವಿದ್ಯಾರ್ಥಿ ಮುಖಂಡ ಉಮರ್ ಖಲೀದ್ ಮೇಲೆ ದಾಳಿ ಹಾಗೂ ಲಂಡನ್ ನಲ್ಲಿ ಸಂಸತ್ ಹೊರಗಡೆ  ಕಾರು ಅಪಘಾತ ಹಿನ್ನೆಲೆಯಲ್ಲಿ ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಭದ್ರತೆಗಾಗಿ ಸುಮಾರು 70 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಧಾನಿ ಭಾಷಣ ವೇಳೆ ಹಿರಿಯ ಸಚಿವರು, ಉನ್ನತ ಅಧಿಕಾರಿಗಳು, ವಿದೇಶಿ ಗಣ್ಯರು ಹಾಗೂ ಸಾಮಾನ್ಯ ಜನರು ಕೂರುವ  ಮೊಘಲ್ ಯುಗದ ಕೋಟೆ ಬಳಿ ಸುಮಾರು 10 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕೆಂಪು ಕೋಟೆ ಸುತ್ತಮುತ್ತ  ಆಕಾಶದಲ್ಲಿ ದಾರಿತಪ್ಪಿದ ಗಾಳಿಪಟಗಳು ಹಾರಾಡದಂತೆ ದೆಹಲಿ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ. ಕಳೆದ ವರ್ಷ ಪ್ರಧಾನಿ ಮೋದಿ ಭಾಷಣ ವೇಳೆಯಲ್ಲಿ ಕಪ್ಪು ಗಾಳಿಪಟ ಹಾರಿ ಬಂದಿತ್ತು. ಈ ಪ್ರದೇಶದಲ್ಲಿ ಬೆಳಗ್ಗೆ 11 ಗಂಟೆಯವರೆಗೂ ಗಾಳಿಪಟ ಹಾರಿಬಿಡದಂತೆ ನಿರ್ಬಂಧ ಹಾಕಲಾಗಿದೆ.

ಕೆಂಪು ಕೋಟೆ ಸಾಗುವ ಮಾರ್ಗದಲ್ಲಿ ಸುಮಾರು 500 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಬಾರಿ ಸ್ವಾತ್ ದಳದ 36 ಮಹಿಳಾ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಹೋಟೆಲ್ ಗಳಲ್ಲಿ ತಪಾಸಣೆ ಕೈಗೊಂಡಿದ್ದು, ಶಂಕಿತ ವಸ್ತುಗಳ ಬಗ್ಗೆ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡ್ರೋಣ್ , ಸ್ಪೋಟಕಗಳಂತಹ  ಯಾವುದೇ ವೈಮಾನಿಕ ಬೆದರಿಕೆ ತಡೆಯಲು ವಿರೋಧಿ ವಿಮಾನ ಬಂದೂಕುದಾರಿಗಳನ್ನು ನಿಯೋಜಿಸಲಾಗಿದೆ. ಕೆಂಪು ಕೋಟೆ ಬಳಿ ಎನ್ ಎಸ್ ಜಿಯ ವಿಶೇಷ ತಂಡವನ್ನು ನಿಯೋಜಿಸಲಾಗಿದೆ.
ದೆಹಲಿ ನಗರದ ಎಲ್ಲಿಯೂ  ಪ್ಯಾರಾ ಗ್ಲೈಡಿಂಗ್, ಬಲೂನ್ ಹಾರಾಡದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರಮೋದಿ ಅವರ ನಿವಾಸ ಹಾಗೂ ಕೆಂಪು ಕೋಟೆಯವರೆಗೂ  ಬಿಗಿ ಭದ್ರತೆಯಲ್ಲಿ ಕರೆದೊಯ್ಯಲಿದ್ದು, ಈ ಮಾರ್ಗದಲ್ಲಿ 100 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ನಿಗಾ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.