ಸರ್ಕಾರ ಟೀಕಿಸುವವರ ವಿರುದ್ಧ ಯಾವ ದಾಳಿ ಇಲ್ಲ ಎಂಬ ಭರವಸೆ ನೀಡಿ: ಪ್ರಧಾನಿ ಮೋದಿಗೆ ಉಮರ್ ಖಾಲಿದ್

ಸ್ವಾತಂತ್ರ್ಯ ದಿನದ ಭಾಷಣ ವೇಳೆ ಸರ್ಕಾರ ಟೀಕಿಸುವವರ ಮೇಲೆ ಯಾವುದೇ ದಾಳಿಗಳಾಗುವುದಿಲ್ಲ ಎಂಬ ಭರವಸೆಯನ್ನು ನೀಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜೆಎನ್'ಯು ವಿದ್ಯಾರ್ಥಿ ಉಮರ್ ಖಾಲಿದ್ ಮಂಗಳವಾರ ಹೇಳಿದ್ದಾನೆ...
ಜೆಎನ್'ಯು ವಿದ್ಯಾರ್ಥಿ ಉಮರ್ ಖಾಲಿದ್
ಜೆಎನ್'ಯು ವಿದ್ಯಾರ್ಥಿ ಉಮರ್ ಖಾಲಿದ್
ನವದೆಹಲಿ: ಸ್ವಾತಂತ್ರ್ಯ ದಿನದ ಭಾಷಣ ವೇಳೆ ಸರ್ಕಾರ ಟೀಕಿಸುವವರ ಮೇಲೆ ಯಾವುದೇ ದಾಳಿಗಳಾಗುವುದಿಲ್ಲ ಎಂಬ ಭರವಸೆಯನ್ನು ನೀಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜೆಎನ್'ಯು ವಿದ್ಯಾರ್ಥಿ ಉಮರ್ ಖಾಲಿದ್ ಮಂಗಳವಾರ ಹೇಳಿದ್ದಾನೆ. 
ನಿನ್ನೆಯಷ್ಟೇ ಉಮರ್ ಖಾಲಿದ್ ಮೇಲೆ ಅನಾಮಧೇಯ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು. ಅದೃಷ್ಟವಶಾತ್ ಉಮರ್ ಖಾಲಿದ್ ಪ್ರಾಣಾಪಾಯದಿಂದ ಪಾರಾಗಿದ್ದರು. 
ಘಟನೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಖಾಲಿದ್, ಮೋದಿಯವರೇ ಸ್ವಾತಂತ್ರ್ಯ ದಿನದ ಭಾಷಣಕ್ಕೆ ಕೆಲ ಸಲಹೆಗಳನ್ನು ಕೇಳಿದ್ದೀರಿ. ನನ್ನ ಬಳಿ ಕೆಲ ಸಲಹೆಗಳಿವೆ. ಸರ್ಕಾರವನ್ನು ಟೀಕಿಸುವವರ ಮೇಲೆ ಯಾವುದೇ ರೀತಿಯ ದಾಳಿಗಳಾಗುವುದಿಲ್ಲ ಎಂಬುದಕ್ಕೆ ಖಾತರಿ ನೀಡುವಿರಾ? ಎಂದು ಕೇಳಿದ್ದಾರೆ. 
ನಿನ್ನೆ ನನ್ನ ಮೇಲೆ ನಡೆದ ಗುಂಡಿನ ದಾಳಿ ಮೌನವಾಗಿರುವಂತೆ ನಮ್ಮನ್ನು ಭಯಪಡಿಸುತ್ತಿದೆ. ಅನ್ಯಾಯದ ವಿರುದ್ಧ ದನಿ ಎತ್ತಿದ್ದಕ್ಕೆ, ದೇಶದ ನಾಗರೀಕರು ತಮ್ಮ ಅಪರಾಧಕ್ಕಾಗಿ ಸಾಯಲು ಸಿದ್ಧರಾಗಿರಬೇಕಾದರೆ, ಸ್ವಾತಂತ್ರ್ಯ ಎಂದರೇನು? 
ಸ್ವಾತಂತ್ರ್ಯ ದಿನಾಚರಣೆಗೆ ಎರಡು ದಿನಗಳಿರುವಾಗ ನನ್ನ ಮೇಲೆ ದಾಳಿ ನಡೆದಿದೆ. ರಾಜಧಾನಿ ದೆಹಲಿಯಲ್ಲಿ ಈ ಸಂದರ್ಭದಲ್ಲಿ ಅತೀ ಹೆಚ್ಚು ಭದ್ರತೆಯನ್ನು ನೀಡಲಾಗಿರುತ್ತದೆ. ಆದರೂ, ಒಬ್ಬ ಶಸ್ತ್ರಾಸ್ತ್ರಧಾರಿ ಹಾಡುಹಗಲೇ ನನ್ನ ಮೇಲೆ ದಾಳಿ ನಡೆಸಿದ್ದಾನೆ. ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರದಿಂದ ತಾವು ಸಂತೋಷದಲ್ಲಿದ್ದೇವೆಂದು ಕೆಲವರು ತಿಳಿದಿದ್ದಾರೆ. 
ಇಂದಲ್ಲ ನಾಳೆ ನನಗೆ ಏನಾದರೂ ಆದರೆ, ಅದಕ್ಕೆ ಕೇವಲ ಅನಾಮಧೇಯ ವ್ಯಕ್ತಿ ಕಾರಣವೆಂದು ಹೇಳಬೇಡಿ. ನಿಜವಾದ ಆರೋಪಿಗಳು ಅಧಿಕಾರದಲ್ಲಿದ್ದು, ದ್ವೇಷ, ರಕ್ತಪಾತ ಹಾಗೂ ಭೀತಿಕರ ವಾತಾರವಣ ಸೃಷ್ಟಿಸುತ್ತಿದ್ದಾರೆ. ಕೊಲೆಗಡುಕರಿಗೆ ಹಾಗೂ ಸಾಮೂಹಿಕ ಹತ್ಯೆಗಳಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುತ್ತಿದ್ದಾರೆ. ಆಡಳಿತಾರೂಢ ಬಿಜೆಪಿ ಹಾಗೂ ಸುದ್ದಿ ವಾಹಿನಿಗಳ ವಾಚಕರು ಮತ್ತು ಸುದ್ದಿ ವಾಹಿನಿಗಳು ನನ್ನ ವಿರುದ್ಧ ಇಲ್ಲ ಸಲ್ಲದ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ. 
ಪೊಲೀಸರು ಸೆಕ್ಷನ್ 307 ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇಸರಿ ದಳದವರು ಈ ರೀತಿಯ ದಾಳಿಗಳು ಹಿಂದೆಂದೂ ನಡೆದಿರಲಿಲ್ಲ ಎಂದು ಹೇಳುತ್ತಿದ್ದಾರೆ. 
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವವರನ್ನು ನೋಡಿದರೆ ಹತ್ಯೆ ಹಿಂದೆ ಹಿಂದು ಉಗ್ರ ಸಂಘಟನೆಗಳ ಕೈವಾಡವಿದೆ ಎಂಬುದು ತಿಳಿಯುತ್ತದೆ.  
ನಾಳೆ ಕೂಡ ಸುಳ್ಳುಗಳ ಮಳೆ ಸುರಿಯಲಿದೆ. ನಿಜವಾದ ಸ್ವಾತಂತ್ರ್ಯ ಹಾಗೂ ಗೌರವಕ್ಕಾಗಿ ನಮ್ಮ ಹೋರಾಟವಾಗಿದೆ. ಭಗತ್ ಸಿಂಗ್ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸು ನನಸು ಮಾಡುವಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com