ದೇಶ

ಕೇರಳ ಪ್ರವಾಹ 'ತೀವ್ರ ಸ್ವರೂಪದ ವಿಪತ್ತು' ಎಂದು ಘೋಷಿಸಿದ ಕೇಂದ್ರ, ಕೃಷಿ ಸಾಲ ಮರುಪಾವತಿ 1 ವರ್ಷ ಮುಂದೂಡಿಕೆ

ಕೇರಳ ಪ್ರವಾಹ 'ತೀವ್ರ ಸ್ವರೂಪದ ವಿಪತ್ತು' ಎಂದು ಘೋಷಿಸಿದ ಕೇಂದ್ರ, ಕೃಷಿ ಸಾಲ ಮರುಪಾವತಿ 1 ವರ್ಷ ಮುಂದೂಡಿಕೆ
ರಕ್ಷಣಾ ಕಾರ್ಯಾಚರಣೆ
Published On :
ನವದೆಹಲಿ: ಶತಮಾನದ ಅತ್ಯಂತ ಭೀಕರ ಕೇರಳ ಪ್ರವಾಹವನ್ನು 'ತೀವ್ರ ಸ್ವರೂಪದ ವಿಪತ್ತು' ಎಂದು ಕೇಂದ್ರ ಸರ್ಕಾರ ಸೋಮವಾರ ಘೋಷಿಸಿದೆ.
ಕೇರಳದ ಭೀಕರ ಪ್ರವಾಹ ಮತ್ತು ಭೂ ಕುಸಿತಗಳ ತೀವ್ರತೆ ಮತ್ತು ಪ್ರಮಾಣವನ್ನು ಗಮನಿಸಿದರೆ ಇದೊಂದು 'ತೀವ್ರ ಸ್ವರೂಪದ ವಿಪತ್ತು' ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರು ಕೇರಳ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯಿಸಿದ್ದರು. ಆದರೆ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಬದಲು 'ತೀವ್ರ ಸ್ವರೂಪದ ವಿಪತ್ತು' ಎಂದು ಘೋಷಿಸಿದೆ.
ಇನ್ನು ಬೆಳೆ ನಷ್ಟದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕೇರಳದ ರೈತರ ನೆರವಿಗೆ ಧಾವಿಸಿದ ಬ್ಯಾಂಕ್ ಗಳು, ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ ಕೃಷಿ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷಗಳ ಕಾಲ ಮುಂದೂಡಿವೆ.
ಈ ಮಧ್ಯೆ, ನೂರಾರು ಪ್ರವಾಹ ಸಂತ್ರಸ್ಥರ ಜೀವ ಉಳಿಸಿದ ಮೀನುಗಾರರಿಗೆ ರಾಜ್ಯ ಸರ್ಕಾರ ನೀಡಿದ್ದ 3 ಸಾವಿರಿ ರುಪಾಯಿ ಭತ್ಯೆಯನ್ನು ಪಡೆಯಲು ಮೀನುಗಾರರು ನಿರಾಕರಿಸಿದ್ದಾರೆ.
ಭಾರಿ ಮಳೆ ಹಾಗೂ ಪ್ರವಾಹಕ್ಕೆ ಸಿಲುಕು ದೇವರ ನಾಡಿನಲ್ಲಿ 200ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಅಲಪುಳ, ತ್ರಿಶೂರ್ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಇನ್ನೂ ನೂರಾರು ಮಂದಿ ತಮ್ಮ ಮನೆಯಲ್ಲಿ ಆಹಾರ, ಕುಡಿಯಲು ನೀರು ಸಿಗದೆ ಪರದಾಡುತ್ತಿದ್ದಾರೆ.
ಇಂದು  ಸ್ವಲ್ಪ ಮಟ್ಟಿಗೆ ಮಳೆ ತಗ್ಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಸೋಮವಾರ 10 ಸಾವಿರ ಮಂದಿಯನ್ನು ರಕ್ಷಿಸಲಾಗಿದ್ದು, ಇದುವರೆಗೆ 38 ಸಾವಿರ ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ 3,734 ಕ್ಯಾಂಪ್ ಗಳಲ್ಲಿ ಒಟ್ಟು 8,46,680 ಸಂತ್ರಸ್ಥರು ಇದ್ದು, ರಕ್ಷಣಾ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸುವುದು ನಮ್ಮ ಮುಂದಿನ ಗುರಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.