ಡಿಎಆರ್ ಮರು ಪರೀಕ್ಷೆ: ಆಗಸ್ಟ್ 30ರೊಳಗೆ ಅರ್ಜಿ ಸಲ್ಲಿಸಿ

ರೈಲ್ವೇ ಇಲಾಖೆಯ ಯಡವಟ್ಟಿನಿಂದಾಗಿ ಪರೀಕ್ಷೆ ಬರೆಯಲಾಗದೇ ಪರಿತಪಿಸುತ್ತಿದ್ದ ವಿದ್ಯಾರ್ಥಿಗಳು ಆಗಸ್ಟ್ 30ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ರೈಲ್ವೇ ಇಲಾಖೆಯ ಯಡವಟ್ಟಿನಿಂದಾಗಿ ಪರೀಕ್ಷೆ ಬರೆಯಲಾಗದೇ ಪರಿತಪಿಸುತ್ತಿದ್ದ ವಿದ್ಯಾರ್ಥಿಗಳು ಆಗಸ್ಟ್ 30ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಆಗಸ್ಚ್ 30ರೊಳಗೆ ಎಲ್ಲ ಅಭ್ಯರ್ಥಿಗಳು ತಪ್ಪದೇ ಮರು ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಇಲಾಖೆಯ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ನಿರ್ದೇಶಕರು ತಿಳಿಸಿದ್ದಾರೆ.
ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಇಲಾಖೆಯ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ನಿರ್ದೇಶಕರ ಬೆಂಗಳೂರು ಕಚೇರಿಗೆ ರವಾನಿಸಬೇಕು. ಎಡಿಪಿ, ಕಾರ್ಲ್ ಟನ್ ಹೌಸ್, ಪ್ಯಾಲೆಸ್ ರೋಡ್, ಬೆಂಗಳೂರು ಕಚೇರಿಗೆ ಕಳುಹಿಸಬೇಕು. ಅರ್ಜಿಯಲ್ಲಿ ಅರ್ಜಿದಾರನ ಹೆಸರು, ಅರ್ಜಿ ಸಂಖ್ಯೆ, ರೋಲ್ ನಂಬರ್, ಪರೀಕ್ಷಾ ಕೇಂದ್ರ ಮತ್ತು ವಿಳಾಸ, ಪ್ರಯಾಣದ ದಿನಾಂಕ, ಪಿಎನ್ ಆರ್ ನಂಬರ್, ಟಿಕೆಟ್ ನಕಲು ಪ್ರತಿ ಮತ್ತು ಮೊಬೈಲ್ ಸಂಖ್ಯೆ ಬರೆದು ಕಚೇರಿಗೆ ಕಳುಹಿಸಬೇಕು. ರೈಲ್ವೇ ಟಿಕೆಟ್ ಇಲ್ಲದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದೂ ಇಲಾಖೆ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ
ಡಿಆರ್ ಪರೀಕ್ಷೆಗಾಗಿ ಬೆಳಗಾವಿಯಿಂದ 3 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಶನಿವಾರ ರಾತ್ರಿ ರಾಣಿ ಚನ್ನಮ್ಮ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಭಾನುವಾರ ಬೆಳಗ್ಗೆ 10.30ಕ್ಕೆ ಪರೀಕ್ಷೆ ನಿಗದಿಯಾಗಿದ್ದು, ಅಭ್ಯರ್ಥಿಗಳು ನಸುಕಿನ 6.30ಕ್ಕೆ ಬೆಂಗಳೂರು ತಲುಪಬೇಕಿತ್ತು. ಆದರೆ, ಶನಿವಾರ ರಾತ್ರಿ ಬೆಳಗಾವಿ-ಧಾರವಾಡ ಮಧ್ಯದ ಕಂಬಾರಗಣವಿ ಸ್ಟೇಷನ್​ನಿಂದ ಕೆಲವು ಕಿ.ಮೀ. ದೂರದಲ್ಲಿ ಗೂಡ್ಸ್ ರೈಲೊಂದರ ಇಂಜಿನ್ ಕೆಟ್ಟು ನಿಂತಿದ್ದರಿಂದಾಗಿ ಅದೇ ಹಳಿಯಲ್ಲಿ ತೆರಳಬೇಕಿದ್ದ ರಾಣಿ ಚನ್ನಮ್ಮ ರೈಲನ್ನು ಕಂಬಾರಗಣವಿಯಲ್ಲೇ ನಿಲ್ಲಿಸಲಾಯಿತು. ಬಳಿಕ ಅದರ ಇಂಜಿನ್ ಕಳಚಿ, ಗೂಡ್ಸ್ ರೈಲಿಗೆ ಜೋಡಿಸಿ ಧಾರವಾಡಕ್ಕೆ ಕೊಂಡೊಯ್ಯಲು ರೈಲ್ವೆ ಸಿಬ್ಬಂದಿ ಮುಂದಾದರು. ಈ ಎಡವಟ್ಟಿನಿಂದಾಗಿ ಪರೀಕ್ಷಾರ್ಥಿಗಳು ಕಂಬಾರಗಣವಿಯಲ್ಲೇ ಕಾಯುವಂತಾಯಿತು. 
ಮುಂದೆ ರೈಲು ಅಲ್ಲಿಂದ ವಿಳಂಬವಾಗಿ ಹೊರಟಿದ್ದರಿಂದಾಗಿ ಬೆಳಗ್ಗೆ 6ಕ್ಕೆ ಬೆಂಗಳೂರು ತಲುಪುವ ಬದಲು ಹುಬ್ಬಳ್ಳಿಗೆ ಬಂದು ಸೇರಿತು. ಪರೀಕ್ಷೆ ಬರೆಯುವ ಅವಕಾಶ ತಪ್ಪಿದ್ದರಿಂದ ಕಂಗಾಲಾದ ಅಭ್ಯರ್ಥಿಗಳು ನಿಲ್ದಾಣದಲ್ಲಿಯೇ ಪ್ರತಿಭಟನೆ ಆರಂಭಿಸಿದರು. ಪುನಃ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು. ಇದಕ್ಕ ಪ್ರತಿಕ್ರಿಯಿಸಿದ್ದ ಸಿಎಂ ಕುಮಾರಸ್ವಾಮಿ ಮರು ಪರೀಕ್ಷೆಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ಮರು ಪರೀಕ್ಷೆ ಆಯೋಜನೆಯಾಗಿದ್ದು, ಅಭ್ಯರ್ಥಿಗಳು ಆಗಸ್ಟ್ 30ರೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಇಲಾಖೆ ಆದೇಶ ಹೊರಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com