

ಜೈಪುರ: ರಾಜಸ್ತಾನದ 199 ವಿಧಾನಸಭಾ ಸ್ಥಾನಗಳಿಗೆ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನದಲ್ಲಿ ಬೆಳಗ್ಗೆ 11 ಗಂಟೆಯಷ್ಟು ಹೊತ್ತಿಗೆ ಶೇಕಡಾ 21.89 ರಷ್ಟು ಮತದಾನವಾಗಿದೆ ಎಂದು ರಾಜಸ್ತಾನ ಚುನಾವಣಾ ಆಯೋಗ ತಿಳಿಸಿದೆ.
2ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಬಾರಿ ಕಣಕ್ಕಿಳಿದಿದ್ದಾರೆ. ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆಯೇ ಅಥವಾ ಕಾಂಗ್ರೆಸ್ ಅಧಿಕಾರ ಪಡೆಯುತ್ತದೆಯೇ ಎಂಬುದು ಇಂದಿನ ಮತದಾನದಲ್ಲಿ ನಿರ್ಧಾರವಾಗಲಿದೆ.
ರಾಜ್ಯದ 51,687 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದ್ದು, 259 ಮಂದಿ ಮಹಿಳಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಇದ್ದಾರೆ.
130 ಸೀಟುಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ವಸುಂಧರಾ ರಾಜೆ ಮತ್ತೆ ಮುಖ್ಯಮಂತ್ರಿಯಾಗುವ ಭರವಸೆ ಹೊಂದಿದ್ದರೆ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಸಿಎಂ ಪದವಿ ಗಿಟ್ಟಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ.
ಮುಖ್ಯಮಂತ್ರಿ ವಸುಂಧರಾ ರಾಜೇ ಜಲವಾರ್ ನ ಜಲ್ರಪಟಣ್ ಮತಗಟ್ಟೆ ಸಂಖ್ಯೆ 31ಎಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ನಂತರ ಅವರು ಮಾತನಾಡಿ, ಇದು ಅಭಿವೃದ್ಧಿಗೆ ಹಾಕುತ್ತಿರುವ ಮತ. ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕೂಡ ರಾಜಸ್ತಾನ ಜನತೆಗೆ ಸಂದೇಶ ತಲುಪುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತದಾರರು ಬಿಜೆಪಿಗೆ ಮತ ಹಾಕಿ ಮತ್ತೊಮ್ಮೆ ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸವಿದೆ ಎಂದರು.