ನವದೆಹಲಿ: ರಾಜಸ್ಥಾನದಲ್ಲಿ ಸರಳ ಬಹುಮತ ಪಡೆದಿರುವ ಕಾಂಗ್ರೆಸ್ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದ್ದು, ನೂತನ ಮುಖ್ಯಮಂತ್ರಿ ಆಯ್ಕೆ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ನಾಳೆ ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ನೂತನ ಶಾಸಕರ ಅಭಿಪ್ರಾಯ ಸಂಗ್ರಹಿಸಿದ ನಂತರ ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ರಾಹುಲ್ ಗಾಂಧಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಅವರು ಹೇಳಿದ್ದಾರೆ.
ಶಾಸಕಾಂಗ ಸಭೆಯಲ್ಲಿ ಶಾಸಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರ ಅಭಿಪ್ರಾಯ ಪಡೆಯಲಾಗುವುದು. ಬಳಿಕ ಮತ್ತೊಂದು ಶಾಸಕಾಂಗ ಸಭೆ ನಡೆಸಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ.
ರಾಹುಲ್ ಗಾಂಧಿ ಅವರು ಯುವ ನಾಯಕ ಸಚಿನ್ ಪೈಲಟ್ ಬಗ್ಗೆ ಒಲವು ಹೊಂದಿದ್ದು, ಅವರೇ ರಾಜಸ್ಥಾನದ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿದೆ.