ಲಖನೌ: ಸ್ಥಳೀಯರು ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳಲು ಇತರ ರಾಜ್ಯಗಳ 'ಹೊರಗಿನವರು' ಕಾರಣ ಎಂದಿದ್ದ ಮಧ್ಯ ಪ್ರದೇಶದ ನೂತನ ಮುಖ್ಯಮಂತ್ರಿ ಕಮಲ್ ನಾಥ್ ಅವರ ಹೇಳಿಕೆ ಸಮಾಜವಾದಿ ಪಕ್ಷ ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಮಧ್ಯ ಪ್ರದೇಶ ಮುಖ್ಯಮಂತ್ರಿಯ ಹೇಳಿಕೆ ಒಳ್ಳೆಯದಲ್ಲ. ಅದು ಮಹಾರಾಷ್ಟ್ರ ನಾಯಕರಂತೆ ಉತ್ತರ ಭಾರತೀಯರ ವಿರೋಧಿ ಹೇಳಿಕೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಹೇಳಿದ್ದಾರೆ.
ಕಮಲ್ ನಾಥ್ ಅವರು ಉತ್ತರ ಪ್ರದೇಶ ಮತ್ತು ಬಿಹಾರ ಜನತೆಯನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರ ರಚನೆಯಲ್ಲಿ ಈ ಎರಡು ರಾಜ್ಯಗಳ ಜನತೆ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದನ್ನು ಕಾಂಗ್ರೆಸ್ ನಾಯಕ ಅರಿತುಕೊಳ್ಳಬೇಕು ಎಂದಿದ್ದಾರೆ ಎಂದಿದ್ದಾರೆ.
ಬಿಹಾರ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಿಂದ ಜನರು ಉದ್ಯೋಗಕ್ಕಾಗಿ ಬರುವುದರಿಂದ ಮಧ್ಯಪ್ರದೇಶದ ಸ್ಥಳೀಯ ಜನರಿಗೆ ಉದ್ಯೋಗ ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಶೇ.70ರಷ್ಟು ಉದ್ಯೋಗಾವಕಾಶ ನೀಡುವ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವುದಾಗಿ ಕಮಲ್ ನಾಥ್ ಅವರು ಹೇಳಿದ್ದರು.