

ನವದೆಹಲಿ: ರಾಮಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಮಾರ್ಚ್ 14ಕ್ಕೆ ಸುಪ್ರೀಂಕೋರ್ಟ್ ಮುಂದೂಡಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಾಸೀರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ. ಇದು ಸಂಪೂರ್ಣ ಭೂವಿವಾದವಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಸಮಗ್ರ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಮಾರ್ಚ್ 14ಕ್ಕೆ ನಿಗದಿಪಡಿಸಿದೆ.
ಈ ಪ್ರಕರಣ ಸಂಬಂಧ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆಯಾಗಿದ್ದು, ಕಳೆದ ವರ್ಷ ಡಿಸೆಂಬರ್ 5 ರಂದು ನಡೆದ ವಿಚಾರಣೆ ವೇಳೆ 2019ರ ಚುನಾವಣೆ ನಂತರ ವಿವಾದ ಬಗೆಹರಿಸುವಂತೆ ಸುನ್ನಿ ವಕ್ಪ್ ಬೋರ್ಡ್ ಪರ ವಕೀಲ ಕಪಿಲ್ ಸಿಬಲ್ ಮನವಿ ಮಾಡಿದ್ದರು. ಈ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.
ಈ ಮಧ್ಯೆ ಅಯೋಧ್ಯ ಸದ್ಭಾವನಾ ಸಮನ್ವಯ ಸಮಿತಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಪತ್ರವೊಂದನ್ನು ಬರೆದಿದ್ದು, ವಿವಾದಿತ ನಿವೇಶವನ್ನು ಹಿಂದೂ ಸಮುದಾಯಕ್ಕೆ ನೀಡಿ, ವಿವಾದಿತ ಜಾಗದಲ್ಲಿ ಮಸೀದಿ ನಿರ್ಮಿಸುವಂತೆ ಸಲಹೆ ನೀಡಿತ್ತು.
ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸ್ಥಾಪಕ ರವಿಶಂಕರ್ ಗುರೂಜಿ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮೌಲಾನ ಸಯ್ಯದ್ ಸಲ್ಮಾನ್ ಹುಸೇನ್ ನಾದ್ವಿ ಮತ್ತು ಜಾಪರ್ ಫಾರೂಖಿ ಅವರೊಂದಿಗೆ ರವಿಶಂಕರ್ ಗುರೂಜಿ ಚರ್ಚೆ ನಡೆಸಿದ್ದಾರೆ.