ಘಟನೆ ಬಳಿಕ ನೇರವಾಗಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಕಚೇರಿಗೆ ತೆರಳಿದ ಅಂಶು ಪ್ರಕಾಶ್ ಅವರು ಈ ಬಗ್ಗೆ ದೂರು ಕೂಡ ನೀಡಿದ್ದಾರೆ ಎಂದು ತಿಳಿದುಬಂದಿದೆ. ದೂರಿನಲ್ಲಿ ಆಪ್ ಶಾಸಕರಾದ ಅಮಾನತ್ತುಲ್ಲಾಖಾನ್ ಅವರ ಹೆಸರು ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಜಾಹಿರಾತು ಬಿಡುಗಡೆ ಸಂಬಂಧ ಆಪ್ ಶಾಸಕರು ಮತ್ತು ದೆಹಲಿ ಮುಖ್ಯಕಾರ್ಯದರ್ಶಿ ಅಂಶು ಪ್ರಕಾಶ್ ಅವರ ನಡುವೆ ವಾಕ್ಸಮರ ನಡೆದಿದ್ದು, ಈ ವೇಳೆ ಶಾಸಕ ಅಮಾನತ್ತುಲ್ಲಾಖಾನ್ ಸೇರಿದಂತೆ ಇತರೆ ಇಬ್ಬರು ಶಾಸಕರು ಅಂಶು ಪ್ರಕಾಶ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಂತೆಯೇ ಲೆಫ್ಟಿನೆಂಟ್ ಗವರ್ನರ್ ಭೇಟಿ ಬಳಿಕ ದೆಹಲಿಯ ಸರ್ಕಾರಿ ಅಧಿಕಾರಿಗಳು ಸಭೆ ಕರೆದಿರುವ ಅಂಶು ಪ್ರಕಾಶ್ ಅವರು, ಈ ಬಗ್ಗೆ ಪ್ರತಿಭಟನೆ ನಡೆಸುವ ಮುನ್ಸೂಚನೆ ನೀಡಿದ್ದಾರೆ.