'ಪದ್ಮಾವತ್' ಪ್ರದರ್ಶಿಸುವ ಚಿತ್ರರಂಗಗಳಿಗೆ ಬೆಂಕಿ ಹಚ್ಚುತ್ತೇವೆ; ರಜಪೂತ ಸಮುದಾಯಗಳ ಬೆದರಿಕೆ

ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಪದ್ಮಾವತ್ ಚಿತ್ರವನ್ನು ಪ್ರದರ್ಶಿಸುವ ಚಿತ್ರರಂಗಗಳಿಗೆ ಬೆಂಕಿ ಹಚ್ಚುತ್ತೇವೆಂದು ರಜಪೂತ ಸಮುದಾಯಗಳು ಗುರುವಾರ ಬೆದರಿಕೆ ಹಾಕಿವೆ...
ನವದೆಹಲಿ: ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಪದ್ಮಾವತ್ ಚಿತ್ರವನ್ನು ಪ್ರದರ್ಶಿಸುವ ಚಿತ್ರರಂಗಗಳಿಗೆ ಬೆಂಕಿ ಹಚ್ಚುತ್ತೇವೆಂದು ರಜಪೂತ ಸಮುದಾಯಗಳು ಗುರುವಾರ ಬೆದರಿಕೆ ಹಾಕಿವೆ. 
ರಾಜಸ್ತಾನ, ಗುಜರಾತ್, ಹರಿಯಾಣ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿ ಪದ್ಮಾವತ್ ಚಿತ್ರ ಬಿಡುಗಡೆಗೆ ನಿಷೇಧ ಹೇರಿದ್ದವು. ಈ ಹಿನ್ನಲೆಯಲ್ಲಿ ಚಿತ್ರದ ನಿರ್ಮಾಪಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ನಿರ್ಮಾಪಕರ ಮನವಿಯನ್ನು ಇಂದು ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಸೆನ್ಸಾರ್ ಮಂಡಳಿ ಪ್ರಮಾಣಪತ್ರ ಪಡೆದಿರುವ ಯಾವುದೇ ಚಿತ್ರವನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ, ಪದ್ಮಾವತ್ ಚಿತ್ರವನ್ನು ದೇಶದಾದ್ಯಂತ ಬಿಡುಗಡೆ ಮಾಡಲು ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದೆ. 
ಸುಪ್ರೀಂಕೋರ್ಟ ಆದೇಶ ಹಿನ್ನಲೆಯಲ್ಲಿ ಪದ್ಮಾವತ್ ಚಿತ್ರದ ಬಿಡುಗಡೆ ನಿಷೇಧ ಕುರಿತ ತಮ್ಮ ಬೇಡಿಕೆಯನ್ನು ಪುನರುಚ್ಛರಿಸಿರುವ ರಾಜಪೂತ ಸಮುದಾಯಗಳು ಇದು ನಮ್ಮ ಕೊನೆಯ ಎಚ್ಚರಿಕೆಯಾಗಿದೆ. ರಾಣಿ ಪದ್ಮಾವತಿಯವರ ಘನತೆ, ಗೌರವಗಳೊಂದಿಗೆ ಆಟವಾಡಲು ನಾವು ಬಿಡುವುದಿಲ್ಲ. ಪದ್ಮಾವತ್ ಚಿತ್ರ ಪ್ರದರ್ಶಿಸುವ ಎಲ್ಲಾ ಚಿತ್ರಮಂದಿರಗಳಿಗೆ ನಾವು ಬೆಂಕಿ ಹಚ್ಚುತ್ತೇವೆಂದು ಹೇಳಿದೆ. 
ರಜಪೂತ ಕರ್ಣಿ ಸೇನಾ ಮುಖ್ಯಸ್ಥ ಲೋಕೇಂದ್ರ ಸಿಂಗ್ ಕಳವಿ ಮಾತನಾಡಿ, ಸಾಮಾಜಿಕ ಸಂಘಟನೆಗಳು ಪದ್ಮಾವತ್ ಚಿತ್ರದ ಬಿಡುಗಡೆಯನ್ನು ತಡೆಹಿಡಿಯಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ. ಪದ್ಮಾವತ್ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಬಾರದು. ಪದ್ಮಾವತ್ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರಗಳ ಮುಂದೆ ಜನರು ಜಮಾಯಿಸಿ ಸ್ಥಳದಲ್ಲಿ ಕರ್ಫ್ಯೂ ರೀತಿಯ ಸನ್ನಿವೇಶವನ್ನು ಉಂಟು ಮಾಡಿ ಪ್ರತಿಭಟನೆಯನ್ನು ನಡೆಸಬೇಕೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com