ದೆಹಲಿ ಮೆಟ್ರೋ ರೈಲಿನಲ್ಲಿ ಮಹಿಳೆ ಬಳಿ 20 ಜೀವಂತ ಗುಂಡು ಪತ್ತೆ
ರಾಜಧಾನಿ ದೆಹಲಿ ಮೆಟ್ರೋ ರೈಲಿನಲ್ಲಿ 20 ಜೀವಂತ ಗುಂಡುಗಳನ್ನು ಇಟ್ಟುಕೊಂಡು ಪ್ರಯಾಣಿಸುತ್ತಿದ್ದ ಮಹಿಳೆಯನ್ನು ದೆಹಲಿ ಮೆಟ್ರೋ ನಿಲ್ದಾಣದ ಅಧಿಕಾರಿಗಳು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ...
ನವದೆಹಲಿ: ರಾಜಧಾನಿ ದೆಹಲಿ ಮೆಟ್ರೋ ರೈಲಿನಲ್ಲಿ 20 ಜೀವಂತ ಗುಂಡುಗಳನ್ನು ಇಟ್ಟುಕೊಂಡು ಪ್ರಯಾಣಿಸುತ್ತಿದ್ದ ಮಹಿಳೆಯನ್ನು ದೆಹಲಿ ಮೆಟ್ರೋ ನಿಲ್ದಾಣದ ಅಧಿಕಾರಿಗಳು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.
ಉತ್ತರಪ್ರದೇಶದ ಮುರಾದಾಬಾದ್ ಮೂಲಕ ಮಹಿಳೆ ನಿನ್ನೆ ಸಂಜೆ ದೆಹಲಿಯ ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಿದ್ದರು. ಆದರ್ಶ್ ನಗರದ ಮೆಟ್ರೋ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿಗಳು ಮಹಿಳೆಯ ಬ್ಯಾಗ್'ನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳ ಬ್ಯಾಗ್ ನಲ್ಲಿ 20 ಜೀವಂತ ಗುಂಡುಗಳು ಪತ್ತೆಯಾಗಿವೆ.
ಮಹಿಳೆ ತನ್ನ ತಂದೆ ಹಾಗೂ ಕುಟುಂಬ ಸದಸ್ಯರೊಂದಿಗೆ ಪ್ರಯಾಣ ಮಾಡುತ್ತಿದ್ದರು. ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಹಿಳೆಯ ತಂದೆ, ನನ್ನ ಬಳಿ ಶಸ್ತ್ರಾಸ್ತ್ರ ಪರವಾನಗಿ ಇದ್ದು, 20 ಸುತ್ತಿನ ಜೀವಂತ ಗುಂಡುಗಳು ನನ್ನದು ಎಂದು ಹೇಳಿದ್ದಾರೆ.
ಇದೀಗ ಮಹಿಳೆ ಹಾಗೂ ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿರುವ ಭದ್ರತಾ ಸಿಬ್ಬಂದಿಗಳು ತನಿಖೆ ಆರಂಭಿಸಿದ್ದಾರೆ. ಈ ನಡುವೆ ಗಣರಾಜ್ಯೋತ್ಸವ ದಿನ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ದೆಹಲಿ ಮೆಟ್ರೋ ಹಾಗೂ ಸಾರ್ವಜನಿಕ ಸಾರಿಗೆ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.