ಭಾರತ-ರಷ್ಯಾ ಯುದ್ಧವಿಮಾನ ಜಂಟಿ ಅಭಿವೃದ್ಧಿ ಯೋಜನೆ ಮರುಪರಿಶೀಲನೆ: ವರದಿ

ಭಾರತ ಮತ್ತು ರಷ್ಯಾ ದೇಶಗಳು ಜಂಟಿಯಾಗಿ ಯುದ್ಧ ವಿಮಾನ ನಿರ್ಮಾಣ ಮಾಡಬೇಕು ಎಂಬ ಬಹು ಮಹತ್ವಾಕಾಂಕ್ಷಿ ಯೋಜನೆಗೆ ಭಾರಿ ಹಿನ್ನಡೆಯಾಗಿದ್ದು, ಯೋಜನೆಯನ್ನು ಮರುಪರಿಶೀಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಭಾರತ ಮತ್ತು ರಷ್ಯಾ ದೇಶಗಳು ಜಂಟಿಯಾಗಿ ಯುದ್ಧ ವಿಮಾನ ನಿರ್ಮಾಣ ಮಾಡಬೇಕು ಎಂಬ ಬಹು ಮಹತ್ವಾಕಾಂಕ್ಷಿ ಯೋಜನೆಗೆ ಭಾರಿ ಹಿನ್ನಡೆಯಾಗಿದ್ದು, ಯೋಜನೆಯನ್ನು ಮರುಪರಿಶೀಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಭಾರತ ಮತ್ತು ರಷ್ಯಾ ಜಂಟಿಯಾಗಿ 5ನೇ ತಲೆಮಾರಿನ ಯುದ್ಧವಿಮಾನಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಮರುಪರಿಶೀಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಯೋಜನೆಯಲ್ಲಿ ಮುಂದುವರೆಯುವ ಬಗ್ಗೆ ಭಾರತೀಯ ವಾಯುಪಡೆ ಮತ್ತು ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್‌ಎಎಲ್‌) ಭಿನ್ನ ನಿಲುವು ಹೊಂದಿದೆ. ಒಮ್ಮತ ನಿಲುಲು ಇಲ್ಲದ ಕಾರಣ ಈ ಯೋಜನೆಯನ್ನು ಭಾರತ ಮರು ಪರಿಶೀಲಿಸುವುದಾಗಿ ಹೇಳಿದೆ ಎಂದು ತಿಳಿದುಬಂದಿದೆ. 
2007ರಲ್ಲಿ ಈ ಬಹು ಉದ್ದೇಶಿತ ಯೋಜನೆಗೆ ಭಾರತ ಮತ್ತು ರಷ್ಯಾಗಳು ಒಮ್ಮತ ಸೂಚಿಸಿದ್ದವು. ಸುಮಾರು 2 ಲಕ್ಷ ಕೋಟಿ (3,000 ಕೋಟಿ ಅಮೆರಿಕನ್ ಡಾಲರ್) ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಆದರೆ 11 ವರ್ಷಗಳಿಂದ ಈ ಯೋಜನೆ ನನೆಗುದಿಗೆ ಬಿದ್ದಿದ್ದು, ಭವಿಷ್ಯ ಅತಂತ್ರವಾಗಿದೆ. ಒಪ್ಪಂದದ ಅಂತಿಮ ರೂಪ ಇನ್ನೂ ಸಿದ್ಧವಾಗಿಲ್ಲ ಅಲ್ಲದೆ ಯೋಜನೆಯ ವೆಚ್ಚ ಹಂಚಿಕೆಯ ಬಗ್ಗೆ ಎರಡೂ ದೇಶಗಳು ಒಮ್ಮತಕ್ಕೆ ಬಂದಿಲ್ಲ. ಇದಲ್ಲದೆ ವಿಮಾನದ ಸ್ವರೂಪ ಸಾಮರ್ಥ್ಯದ ಬಗ್ಗೆ ಕರಡನ್ನೂ ಸಿದ್ಧಪಡಿಸಿಲ್ಲ. ಅಲ್ಲದೆ ಎಷ್ಟು ವಿಮಾನಗಳನ್ನು ತಯಾರಿಸಬೇಕು ಎಂಬುದೂ ನಿರ್ಧಾರವಾಗಿಲ್ಲ. ಇದರ ಜೊತೆಗೆ ತಂತ್ರಜ್ಞಾನ ವರ್ಗಾವಣೆ ಸಂಬಂಧವೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. 
ಮನೋಹರ್ ಪರಿಕ್ಕರ್ ರಕ್ಷಣಾ ಸಚಿವರಾಗಿದ್ದಾಗ 2016ರಲ್ಲಿ ಮತ್ತೆ ಮಾತುಕತೆ ಆರಂಭವಾಗಿತ್ತಾದರೂ, ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಯೋಜನೆಯ ವೆಚ್ಚ ತೀರಾ ದೊಡ್ಡದು. ಹೀಗಾಗಿ ಪ್ರತಿ ವಿಮಾನಕ್ಕೆ ವಿನಿಯೋಗವಾಗುವ ಮೊತ್ತವೂ ವಿಪರೀತವಾಗಲಿದೆ. ವೆಚ್ಚ ಮತ್ತು ವಿಮಾನದಿಂದ ಆಗುವ ಅನುಕೂಲಗಳು ಪರಸ್ಪರ ತಾಳೆಯಾಗುವುದಿಲ್ಲ. ಹೀಗಾಗಿ ಯೋಜನೆಯನ್ನು ಕೈಬಿಡುವುದೇ ಒಳ್ಳೆಯದು ಎಂದು ಭಾರತೀಯ ವಾಯುಪಡೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. 
ಆದರೆ ಇದಕ್ಕೆ ಭಿನ್ನ ಅಭಿಪ್ರಾಯವೆಂಬಂತೆ, ಯಾವ ದೇಶವೂ ವಿಮಾನದ ತಂತ್ರಜ್ಞಾನವನ್ನು ಈವರೆಗೆ ಭಾರತಕ್ಕೆ ನೀಡಿಲ್ಲ. ಈ ಯೋಜನೆಯಲ್ಲಿ ಅಂತಹ ತಂತ್ರಜ್ಞಾನವೂ ನಮ್ಮ ಕೈವಶವಾಗುವ ಸಾಧ್ಯತೆ ಇದೆ. ಇದರಿಂದ ರಕ್ಷಣಾ ಕ್ಷೇತ್ರದಲ್ಲಿ ನಮ್ಮ ಸ್ಥಾನ–ಸಾಮರ್ಥ್ಯ ಬದಲಾಗಲಿದೆ. ಹೀಗಾಗಿ ಯೋಜನೆಯನ್ನು ಅಂತಿಮಗೊಳಿಸುವುದು ಅತ್ಯಗತ್ಯ ಎಂದು ಎಚ್‌ಎಎಲ್ ಅಭಿಪ್ರಾಯಪಟ್ಟಿದೆ.
ಒಟ್ಟಾರೆ ಎಚ್ ಎಎಲ್ ಮತ್ತು ಭಾರತೀಯ ವಾಯುಪಡೆಯ ಭಿನ್ನಾಭಿಪ್ರಾಯಗಳಿಂದಾಗಿ ಇಂಡೋ-ರಷ್ಯಾ ಮಹತ್ವಾಕಾಂಕ್ಷಿ ಯೋಜನೆಯೊಂದು ನೆನೆಗುದಿಗೆ ಬಿದ್ದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com