ಭುವನೇಶ್ವರ್/ಬಾಲಾಸೋರ್: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಟ್ರಕ್‍ವೊಂದು ಶಾಲಾ ಮಕ್ಕಳ ಮೇಲೆ ಹರಿದ ಪರಿಣಾಮ ಐವರು ಮಕ್ಕಳು ಸಾವನ್ನಪ್ಪಿದ್ದು ನಾಲ್ವರು ಮಕ್ಕಳ ಸ್ಥಿತಿ ಗಂಭೀರವಾಗಿದೆ.
ರಾನಿಟೆಲ್ ಹೈ ಸ್ಕೂಲ್ ಗೆ ಸೇರಿದ ಮಕ್ಕಳು ಸಂಜೆ 4.30ರ ಸುಮಾರಿಗೆ ಸೈಕಲ್ ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ವೇಗವಾಗಿ ಬಂದ ಲಾರಿ ಶಾಲಾ ಮ್ಕಳ ಮೇಲೆ ಹರಿದಿದೆ. ಈ ವೇಳೆ ಸ್ಥಳದಲ್ಲೇ ಐವರು ಮಕ್ಕಳು ಸಾವನ್ನಪ್ಪಿದ್ದು ನಾಲ್ವರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಟಕ್ ನ ಎಸ್ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ.
ಅಪಘಾತ ನಂತರ ಟ್ರಕ್ ಚಾಲಕ ಮತ್ತು ಸಹಾಯಕ ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಮಕ್ಕಳ ಸಾವಿನಿಂದ ನೊಂದ ಗ್ರಾಮಸ್ಥರು ಲಾರಿಗೆ ಬೆಂಕಿ ಹಚ್ಚಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಹಾಗೂ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಈ ಅಪಘಾತ ಕುರಿತಂತೆ ವಿಷಾಧ ವ್ಯಕ್ತಪಡಿಸಿರುವ ಸಾರಿಗೆ ಸಚಿವ ನ್ರುಸಿಂಗ್ ಸಾಹೋ ಅವರು ಇದೊಂದು ದುರದೃಷ್ಟಕರ. ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದ್ದು ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಲಾಗಿದೆ ಎಂದರು.