ಚೆನ್ನೈ: ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
ಕರುಣಾನಿಧಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ಮಾಜಿ ಸಿಎಂ ಕರುಣಾನಿಧಿ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಚೆನ್ನಾಗಿದ್ದಾರೆ. ತಮಿಳು ನಾಡಿನ ಜನರಂತೆ ಅವರೂ ಒಬ್ಬ ಗಟ್ಟಿ ಮನಸಿನ ವ್ಯಕ್ತಿ. ತಮಿಳು ನಾಡಿನ ಸ್ಪೂರ್ತಿಯನ್ನೇ ಅವರು ತಮ್ಮಲ್ಲಿ ಆವಾಹಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರೊಂದಿಗೆ ಕಾಂಗ್ರೆಸ್ ಸುದೀರ್ಘಕಾಲದಿಂದ ಸಂಬಂಧ ಹೊಂದಿದೆ ಎಂದು ರಾಹುಲ್ ತಿಳಿಸಿದ್ದಾರೆ.
ಕರುಣಾನಿಧಿ ಜತೆಗೆ ಸುಮಾರು 15 ನಿಮಿಷಗಳನ್ನು ಕಳೆದ ರಾಹುಲ್ ಗಾಂಧಿ, ತನ್ನ ತಾಯಿ ಸೋನಿಯಾ ಗಾಂಧಿ ಅವರು ಕರುಣಾನಿಧಿ ಮತ್ತು ಅವರ ಕುಟುಂಬದವರಿಗೆ ಶುಭ ಹಾರೈಕೆಗಳನ್ನು ನನ್ನ ಜೊತೆ ಕಳುಹಿಸಿದ್ದಾರೆ ಎಂದು ಹೇಳಿದರು.