ಅಹ್ಮದಾಬಾದ್: ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಮಹಿಳೆ ಕುರ್ಚಿ ಮೇಲೆ ಕುಳಿತಿದ್ದಕ್ಕಾಗಿ ಆಕೆಯ ಮೇಲೆ ದಾಳಿ ನಡೆದಿರುವ ಘಟನೆ ಅಹ್ಮದಾಬಾದ್ ನಲ್ಲಿ ನಡೆದಿದೆ.
ಪಲ್ಲವಿ ಬೆನ್ ಜಾದವ್ (45) ಹಲ್ಲೆಗೊಳಗಾಗಿರುವ ಮಹಿಳೆಯಾಗಿದ್ದು, ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಆಧಾರ್ ಕಾರ್ಡ್ ವಿತರಣೆಯ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೆಲಸ ಮಾಡುತ್ತಿದ್ದ ವೇಳೆ ಕುರ್ಚಿ ಮೇಲೆ ಕುಳಿತಿದ್ದನ್ನು ಕಂಡ ಜಯರಾಜ್ ವೆಗಾಡ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.
ದಲಿತ ಮಹಿಳೆಯಾಗಿದ್ದು ಕುರ್ಚಿ ಮೇಲೆ ಕೂರುವಷ್ಟು ಧೈರ್ಯವೇ? ಎಂದು ಕೇಳಿದ್ದು, ಕುರ್ಚಿಗೆ ಒದ್ದಿದ್ದಾನೆ, ಜಯರಾಜ್ ವೆಗಾಡ್ ನ ದಬ್ಬಾಳಿಕೆ ಇಷ್ಟಕ್ಕೇ ಕೊನೆಯಾಗದೇ ಸಂಜೆ ಮೆನೆಗೆ ತೆರಳಿ ಅಲ್ಲಿಯೂ ಹಲ್ಲೆ ನಡೆಸಿದ್ದಾನೆ ಎಂದು ಪಲ್ಲವಿ ಬೆನ್ ಪತಿ ಗಣ್ಪತ್ ಜಾದವ್ ದೂರಿನಲ್ಲಿ ಹೇಳಿದ್ದಾರೆ.
ಎಸ್ ಸಿ-ಎಸ್ ಟಿ ದೌರ್ಜನ್ಯ, ಕೊಲೆ ಯತ್ನಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.