ನವದೆಹಲಿ: ಮಾಜಿ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಕೆ ಕಂಡುಬರುತ್ತಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಮಾಜಿ ಪ್ರಧಾನಿಯ ಆರೋಗ್ಯ ಸ್ಥಿರವಾಗಿದೆ. ಅವರ ಆರೋಗ್ಯದಲ್ಲಿ ಚೇತರಿಗೆ ಕಂಡುಬರುತ್ತಿದೆ ಮತ್ತು ವೈದ್ಯರ ತಂಡ ವಾಜಪೇಯಿ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿದೆ ಎಂದು ಆಸ್ಪತ್ರೆ ತಿಳಿಸಿದೆ.
ವಾಜಪೇಯಿ ಅವರ ಕಿಡ್ನಿ ಕಾರ್ಯನಿರ್ವಹಣೆ ಸಹಜ ಸ್ಥಿತಿಯತ್ತ ಮರಳಿದೆ. ಹೃದಯದ ಬಡಿತ, ನಾಡಿಮಿಡಿತ ಹಾಗೂ ರಕ್ತದೊತ್ತಡ ಸಾಮಾನ್ಯ ಸ್ಥಿತಿಯಲ್ಲಿದೆ ಎಂದು ಕಳೆದ ಬುಧವಾರ ಏಮ್ಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದರು.
93 ವರ್ಷದ ವಾಜಪೇಯಿ ಅವರು ಮೂತ್ರಕೋಶ ಮತ್ತಿತರ ತೊಂದರೆಯಿಂದಾಗಿ ಕಳೆದ ಸೋಮವಾರ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಸೋಮವಾರ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದ ವಾಜಪೇಯಿ ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ. ಅವರು ಸಕ್ಕರೆ ರೋಗ ಬಾಧಿತರಾಗಿದ್ದು, ಒಂದು ಕಿಡ್ನಿ ಕಾರ್ಯನಿರ್ವಹಿಸುತ್ತಿರಲಿಲ್ಲ. 2009ರಲ್ಲಿ ಮೂರ್ಛೆ ರೋಗಕ್ಕೆ ತುತ್ತಾಗಿ ನೆನಪಿನ ಶಕ್ತಿ ಕಳೆದುಕೊಂಡಿದ್ದರು.