ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ)ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಬಿಐ ಭಾನುವಾರ ಮತ್ತೆ ನಾಲ್ವರನ್ನು ಬಂಧಿಸಿದೆ.
ಪಿಎನ್ ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಭರಣ ಉದ್ಯಮಿ ನೀರವ್ ಮೋದಿ ಗ್ರೂಪ್ ಆಫ್ ಕಂಪನಿಯ ಓರ್ವ ಆಡಿಟರ್ ಹಾಗೂ ಇಬ್ಬರು ಉದ್ಯೋಗಿಗಳು ಮತ್ತು ಗೀತಾಂಜಲಿ ಗ್ರೂಪ್ ನಿರ್ದೇಶಕರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ವಂಚನೆಗೆ ಸಹಕರಿಸಿದ ಆರೋಪದ ಮೇಲೆ ನೀರವ್ ಮೋದಿ ಒಡೆತನದ ಫೈರ್ಸ್ಟಾರ್ಟರ್ ಡೈಮಂಡ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನ ಹೆಚ್ಚುವರಿ ಜನರಲ್ ಮ್ಯಾನೇಜರ್ ಮನಿಶ್ ಕೆ ಬೋಸಮಿಯಾ ಹಾಗೂ ಹಣಕಾಸು ವ್ಯವಸ್ಥಾಪಕ ಮಿತೆನ್ ಅನಿಲ್ ಪಾಂಡೆ ಅವರನ್ನು ಸಿಬಿಐ ಬಂಧಿಸಿದೆ.
ಇದೇ ಪ್ರಕರಣ ಸಂಬಂಧ ಆಡಿಟರ್ ಸಂಜಯ್ ರಂಭಿಯಾ ಮತ್ತು ಗೀತಾಂಜಲಿ ಗ್ರೂಪ್ ನ ಶಿವ ರಮಣ್ ನಾಯರ್ ಅವರನ್ನು ಕೇಂದ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.