ಲೋಕಾಯುಕ್ತ ವಿಶ್ವನಾಥ್ ಶೆಟ್ಟಿಗೆ ಚೂರಿ ಇರಿತ: ಆಘಾತ ವ್ಯಕ್ತಪಡಿಸಿದ ಸರ್ಕಾರ

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರಿಗೆ ವ್ಯಕ್ತಿಯೊಬ್ಬ ಚೂರಿ ಇರಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪ್ರಮುಖ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ...
ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ
ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ
ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರಿಗೆ ವ್ಯಕ್ತಿಯೊಬ್ಬ ಚೂರಿ ಇರಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪ್ರಮುಖ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು, ನ್ಯಾಯಮೂರ್ತಿಗಳಿಗೆ ಚೂರಿ ಇರಿದಿರುವ ವ್ಯಕ್ತಿ ತುಮಕೂರಿನ ಗುತ್ತಿಗೆದಾರನಾಗಿದ್ದಾನೆ. ಹಲವು ಗುತ್ತಿಗೆಗಳ ಕುರಿತಂತೆ ಈತ ಲೋಕಾಯುಕ್ತಕ್ಕೆ ದೂರು ನೀಡಿದ್ದ. ನ್ಯಾಯಮೂರ್ತಿಗಳು ಒಬ್ಬರೇ ಇದ್ದಂತಹ ಸಂದರ್ಭದಲ್ಲಿ ಆತ ಚೂರಿ ಹಾಕಿದ್ದಾನೆ. ಪ್ರಸ್ತುತ ನ್ಯಾಯಮೂರ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 
ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಮಾತನಾಡಿ, ಭದ್ರತಾ ವ್ಯವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಲೋಕಾಯುಕ್ತ ಕಚೇರಿಗೆ ಒಬ್ಬ ವ್ಯಕ್ತಿ ಚಾಕು ಹಿಡಿದುಕೊಂಡು ಹೋಗಿದ್ದಾನೆಂದರೆ ಅಲ್ಲಿನ ಭದ್ರತಾ ವ್ಯವಸ್ಥೆಯಲ್ಲಿ ಎಷ್ಟು ಲೋಪವಿದೆ ಎಂಬುದು ತಿಳಿಯುತ್ತದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 
ಈ ನಡುವೆ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಲು, ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ, ವಿಶ್ವನಾಥ್ ಶೆಟ್ಟಿಯವರು ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ, ವೈದ್ಯರೊಂದಿಗೂ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. 
ಕೇಂದ್ರ ಸಚಿವ ಸದಾನಂದ ಗೌಡ ಅವಟು ಟ್ವೀಟ್ ಮಾಡಿದ್ದು, ನ್ಯಾ.ವಿಶ್ವನಾಥ್ ಶೆಟ್ಟಿಯವರಿಗೆ ವ್ಯಕ್ತಿಯೊಬ್ಬ ಅವರದ್ದೇ ಕಚೇರಿಯಲ್ಲಿ ಚಾಕುವಿನಿಂದ ಇರಿದಿದ್ದಾನೆಂದರೆ ಕಾನೂನು ಸುವ್ಯವಸ್ಥೆ ಎಷ್ಟರಮಟ್ಟಿಗೆ ಕುಸಿದಿದೆ ಎಂದು ಊಹಿಸಿ. ನ್ಯಾಯಮೂರ್ತಿಗೆ ರಕ್ಷಣೆ ಕೊಡದ ಸರ್ಕಾರ ಜನಸಾಮಾನ್ಯರಿಗೇನು ಕೊಟ್ಟೀತು? ಗೃಹ ಮಂತ್ರಿಗಳಿಗೆ ಸ್ವಲ್ಪವಾದರೂ ನೈತಿಕತೆ ಇದ್ದರೆ ಕೂಡಲೇ ರಾಜಿನಾಮೆ ನೀಡಲಿ ಎಂದು ಹೇಳಿದ್ದಾರೆ. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಟ್ವೀಟ್ ಮಾಡಿ, ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿಯವರು ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗಲೇ ಅವರ ಮೇಲೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವುದು ತೀವ್ರ ಆಘಾತಕಾರಿ ಮತ್ತು ಅತ್ಯಂತ ಖಂಡನೀಯ. ಲೋಕಾಯುಕ್ತರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆಂದು ಹೇಳಿದ್ದಾರೆ, 

ಕಾಂಗ್ರೆಸ್ ಆಡಳಿತದಿಂದ ರಾಜ್ಯದಲ್ಲಿ ಗೂಂಡಾರಾಜ್ ಪರಿಸ್ಥಿತಿ ನಿರ್ಮಾಣವಾಗಿದೆ. ಲೋಕಾಯುಕ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡುವಷ್ಟು ದುಷ್ಕರ್ಮಿಗೆ ಧೈರ್ಯ ಬಂದಿರುವುದು ಗೃಹ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿ. ಸರ್ಕಾರ ಕೂಡಲೇ ತಪ್ಪಿತಸ್ಥರಿಗೆ ಕಾನೂನಿ ಅಡಿಯಲ್ಲಿ ಕಠಿಣ ಶಿಕ್ಷೆ ನೀಡಬೇಕು. ಎಲ್ಲಾ ದುಷ್ಕರ್ಮಿಗಳಿಗೂ ಇದೊಂದು ಎಚ್ಚರಿಕೆಯ ಘಂಟೆಯಾಗಬೇಕು ಎಂದು ತಿಳಿಸಿದ್ದಾರೆ. 

ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ, ನಿಧಾನಗತಿಯಲ್ಲಿ ಲೋಕಾಯುಕ್ತವನ್ನು ದುರ್ಬಲಗೊಳಿಸಿಕ ಕಾಂಗ್ರೆಸ್ ಸರ್ಕಾರ ನಂತರ ಲೋಕಾಯುಕ್ತ ಸಂಸ್ಥೆಯನ್ನೇ ಮುಗಿಸಿ, ಲೋಕಾಯುಕ್ತರನ್ನು ಮುಗಿಸುವ ಯತ್ನ ನಡೆಸಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸರ್ಕಾರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com