ಬೆಂಗಳೂರು ಮಹಿಳೆಯರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ!

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಇದೇ ಮಾರ್ಚ್ 8ರಂದು ನಗರದ ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಹಿಳೆಯರಿಗೆ ತಿಂಡಿ ಮತ್ತು ಊಟವನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ಹೇಳಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಇದೇ ಮಾರ್ಚ್ 8ರಂದು ನಗರದ ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಹಿಳೆಯರಿಗೆ ತಿಂಡಿ ಮತ್ತು ಊಟವನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ಹೇಳಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮೇಯರ್ ಸಂಪತ್ ರಾಜ್ ಅವರು ಈ ವಿಚಾರ ತಿಳಿಸಿದ್ದು, ನಗರದ ಎಲ್ಲ ಮಹಿಳೆಯರಿಗೆ ಉಚಿತ ತಿಂಡಿ ಮತ್ತು ಆಹಾರ ನೀಡುವುದಾಗಿ ಹೇಳಿದರು. ಇದಕ್ಕೂ ಮೊದಲು ಪಾಲಿಕೆ ಸದಸ್ಯೆಯರಿಗೆ ಮತ್ತು ಮಾಧ್ಯಮದ ಮಹಿಳೆಯರಿಗೆ ಉಚಿತವಾಗಿ ಆಹಾರ ನೀಡಲು ತೀರ್ಮಾನಿಸಿರುವುದಾಗಿ ಮೇಯರ್‌ ಪ್ರಕಟಿಸಿದರು. ಇದಕ್ಕೆ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಎಲ್ಲ ಮಹಿಳೆಯರಿಗೂ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಮೇಯರ್‌ ನಗರದ ಎಲ್ಲ ಮಹಿಳೆಯರಿಗೂ ಉಚಿತ ತಿಂಡಿ ಮತ್ತು ಊಟ ನೀಡುವುದಾಗಿ ಘೋಷಣೆ ಮಾಡಿದರು.
ಇದಕ್ಕೂ ಮೊದಲು ಮಾತನಾಡಿದ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, 'ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಪೂರ್ಣ ಖರ್ಚಾಗಿಲ್ಲ. ಆದಾಯ ಸಂಗ್ರಹದಲ್ಲೂ ಗುರಿ ಸಾಧಿಸಿಲ್ಲ. ಈಗ ಮಂಡಿಸಿರುವ ಬಜೆಟ್‌ ವಾಪಸ್‌ ಪಡೆದು, ವಾಸ್ತವ ಬಜೆಟ್‌ ಮಂಡಿಸಬೇಕು’ ಎಂದು ಒತ್ತಾಯಿಸಿದರು.
ಬೆಂಗಳೂರಿಗೆ ನೀರಿನ ಸಮಸ್ಯೆ ಕಾಡದು: ಮೇಯರ್‌
ಇದೇ ವೇಳೆ ಬೆಂಗಳೂರಿನ ನೀರಿನ ಸಮಸ್ಯೆ ಕುರಿತು ಮಾತನಾಡಿದ ಮೇಯರ್ ಸಂಪತ್ ರಾಜ್ ಅವರು, 'ನಗರಕ್ಕೆ ಈ ಬಾರಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಜಲಾಶಯಗಳಲ್ಲಿ ಸಾಕಷ್ಟು ನೀರಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್‌ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರು. ಮುಂಗಾರಿನಲ್ಲಿ ಸಾಕಷ್ಟು ಮಳೆಯಾದರೂ ಕೆಲವು ವಾರ್ಡ್‌ಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಸಿಲ್ಲ. ಕೊಳವೆ ಬಾವಿಗಳಲ್ಲಿ ನೀರಿಲ್ಲದಂತಾಗಿದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ ಸ್ಥಿತಿಯೂ ನಗರಕ್ಕೆ ಬರಲಿದೆ ಎಂದು ವರದಿಯಾಗಿದೆ. ಪಾಲಿಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌, ‘ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲೇ ಪಾಲಿಕೆ ಮತ್ತು ಜಲಮಂಡಳಿ ಅಧಿಕಾರಿಗಳೊಂದಿಗೆ ಮಂಗಳವಾರ ಬೆಳಿಗ್ಗೆ ನಗರದ ಪ್ರಮುಖ ಜಲಾಗರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ನಮಗೆ ಈ ಬೇಸಿಗೆಗೆ ಬೇಕಾಗುವಷ್ಟು ನೀರು ಈಗಾಗಲೇ ಜಲಾಗರಗಳಿಗೆ ಬಂದಿದೆ. ನೀರಿನ ಸಮಸ್ಯೆ ಗಂಭೀರವಾಗಿರುವ ಪ್ರದೇಶಗಳಿಗೆ ಜಲಮಂಡಳಿಯು 60 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಿದೆ’ ಎಂದು ತಿಳಿಸಿದರು.ಇದೇ ನವೇೆ ‘ನಗರಕ್ಕೆ ಈ ಬಾರಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಜಲಾಶಯಗಳಲ್ಲಿ ಸಾಕಷ್ಟು ನೀರಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com