ರಾಫೆಲ್ ಯುದ್ಧ ವಿಮಾನ ವಿವಾದದ ನಡುವೆಯೇ ಹಲವು ರಕ್ಷಣಾ ಒಪ್ಪಂದಗಳಿಗೆ ಭಾರತ-ಫ್ರಾನ್ಸ್ ಸಹಿ

ಭಾರತ ಮತ್ತು ಫ್ರಾನ್ಸ್ ದೇಶಗಳು ಹಲವು ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದ್ದು, ಪ್ರಮುಖವಾಗಿ ಭಾರತ ಮತ್ತು ಫ್ರಾನ್ಸ್ ನಲ್ಲಿರುವ ವಾಯುನೆಲೆಗಳು, ನೌಕಾ ನೆಲೆಗಳ ಪರಸ್ಪರ ಬಳಕೆ ಮಾಡುವ ಕುರಿತು ಉಭಯ ದೇಶಗಳು ಒಪ್ಪಂದಕ್ಕೆ ಸಹಿಹಾಕಿದ್ದಾರೆ.
ಫ್ರಾನ್ಸ್ ರಕ್ಷಣಾ ಕಾರ್ಯದರ್ಶಿ ಫ್ಲಾರೆನ್ಸ್ ಪಾರ್ಲಿ - ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ಫ್ರಾನ್ಸ್ ರಕ್ಷಣಾ ಕಾರ್ಯದರ್ಶಿ ಫ್ಲಾರೆನ್ಸ್ ಪಾರ್ಲಿ - ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ: ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರನ್ ಅವರು ಭಾರತ ಪ್ರವಾಸದಲ್ಲಿರುವಂತೆಯೇ ಭಾರತ ಮತ್ತು ಫ್ರಾನ್ಸ್ ದೇಶಗಳು ಹಲವು ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದ್ದು, ಪ್ರಮುಖವಾಗಿ ಭಾರತ ಮತ್ತು ಫ್ರಾನ್ಸ್ ನಲ್ಲಿರುವ ವಾಯುನೆಲೆಗಳು, ನೌಕಾ ನೆಲೆಗಳ ಪರಸ್ಪರ ಬಳಕೆ ಮಾಡುವ ಕುರಿತು ಉಭಯ ದೇಶಗಳು ಒಪ್ಪಂದಕ್ಕೆ ಸಹಿಹಾಕಿದ್ದಾರೆ.
ಇತ್ತ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪ್ರಭುತ್ವ ಸಾಧಿಸಲು ಚೀನಾ ಹವಣಿಸುತ್ತಿರುವಾಗಲೇ ಚೀನಾಗೆ ಟಾಂಗ್ ನೀಡಲು ಮುಂದಾಗಿರುವ ಭಾರತ ಇದೀಗ ಫ್ರಾನ್ಸ್ ನೊಂದಿಗೆ ಸೇರಿ ಹಲವು ಪ್ರಮುಖ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದೆ. ಇಂದು ಫ್ರಾನ್ಸ್ ರಕ್ಷಣಾ ಕಾರ್ಯದರ್ಶಿ ಫ್ಲಾರೆನ್ಸ್ ಪಾರ್ಲಿ ಅವರು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಹಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ಪೈಕಿ ಭಾರತ ಮತ್ತು ಫ್ರಾನ್ಸ್ ನಲ್ಲಿರುವ ವಾಯುನೆಲೆಗಳು, ನೌಕಾ ನೆಲೆಗಳ ಪರಸ್ಪರ ಬಳಕೆ ಮಾಡುವ ಕುರಿತು ಉಭಯ ದೇಶಗಳು ಒಪ್ಪಂದಕ್ಕೆ ಸಹಿಹಾಕಿ ಇದಲ್ಲದೆ ಪರಸ್ಪರ ರಕ್ಷಣಾ ಅಗತ್ಯತೆ ಪೂರೈಕೆ ಮಾಡಿಕೊಳ್ಳುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ.
ಇದಲ್ಲದೆ ಭಾರತದ ಬಹು ನಿರೀಕ್ಷಿತ ಅಣ್ವಸ್ಚ್ರ ಸಹಿತ ಮತ್ತು ಅಣು ಚಾಲಿತ ಸ್ಕಾರ್ಪೀನ್ ಜಲಾಂತರ್ಗಾಮಿ ನಿರ್ಮಾಣಗಳ ಕುರಿತೂ ಉಭಯ ದೇಶಗಳ ನಾಯಕರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆದರೆ ಈ ಒಪ್ಪಂದಗಳ ಕುರಿತು ಕೇಂದ್ರ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲವಾದರೂ, ಸರ್ಕಾರಿ ಮೂಲಗಳು ಈ ಬಗ್ಗೆ ಮಾಹಿತಿ ನೀಡಿವೆ ಎನ್ನಲಾಗಿದೆ. ರಕ್ಷಣಾ ಒಪ್ಪಂದಗಳಾದ್ದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳಲು ನಿರ್ಧರಿಸಿದ್ದು, ಈ ಹಿಂದೆ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ಮಾಹಿತಿ ಸೋರಿಕೆಯಾಗಿತ್ತು. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸುವ ದೃಷ್ಟಿಯಿಂದ ಈ ಬಾರಿ ಯಾವುದೇ ರೀತಿಯ ಮಾಹಿತಿ ನೀಡಿಕೆಗೆ ಕೇಂದ್ರ ಸರ್ಕಾರ ಮುಂದಾಗಿಲ್ಲ ಎನ್ನಲಾಗಿದೆ. 
ಇದೇ ವೇಳೆ ಉಭಯ ನಾಯಕರು ಬಹುಕೋಟಿ ರಾಫೆಲ್ ಯುದ್ಧ ವಿಮಾನಗಳ ಒಪ್ಪಂದದ ಕುರಿತೂ ಚರ್ಚೆ ಮಾಡಿದ್ದು, ಈ ವಿವರ ಕೂಡ ಮಾಧ್ಯಮಗಳಿಗೆ ಲಭ್ಯವಾಗಿಲ್ಲ. ಇನ್ನು ಕರಾವಳಿ ಭದ್ರತೆ, ಸಮುದ್ರ ಮಾರ್ಗದ ಸಹಕಾರದ ಕುರಿತು ಫ್ರಾನ್ಸ್-ಭಾರತ ಹಲವು ಒಪ್ಪಂದಗಳಿಗೆ ಸಹಿ ಹಾಕಿವೆ.
ಫ್ರಾನ್ಸ್ ಸರ್ಕಾರದ ಸಹಯೋಗದಲ್ಲಿ ಭಾರತದಲ್ಲಿ ಈಗಾಗಲೇ ಆರು ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಕೆಲವೇ ತಿಂಗಳುಗಳಲ್ಲಿ ಈ ಜಲಾಂತರ್ಗಾಮಿ ನೌಕೆಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com