ಕರ್ನಾಟಕದಿಂದ ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ಕಲುಷಿತ: ಸುಪ್ರೀಂಕೋರ್ಟ್'ಗೆ ಸಿಪಿಸಿಬಿ ವರದಿ

ಕರ್ನಾಟಕ ರಾಜ್ಯದಿಂದ ತಮಿನಾಡಿಗೆ ಹರಿಯುತ್ತಿರುವ ಕಾವೇರಿ ನದಿ ನೀರು ಕಲುಷಿತಗೊಂಡಿದೆ ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಸುಪ್ರೀಂಕೋರ್ಟ್'ಗೆ ವರದಿ ಸಲ್ಲಿಸಿದೆ ಎಂದು ಸೋಮವಾರ ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕರ್ನಾಟಕ ರಾಜ್ಯದಿಂದ ತಮಿನಾಡಿಗೆ ಹರಿಯುತ್ತಿರುವ ಕಾವೇರಿ ನದಿ ನೀರು ಕಲುಷಿತಗೊಂಡಿದೆ ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಸುಪ್ರೀಂಕೋರ್ಟ್'ಗೆ ವರದಿ ಸಲ್ಲಿಸಿದೆ ಎಂದು ಸೋಮವಾರ ತಿಳಿದುಬಂದಿದೆ. 
ತಮಿಳುನಾಡು ರಾಜ್ಯದ ಬೇಡಿಕೆಯಂತೆಯೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾವೇರಿ ಮತ್ತು ಅದರ ಉಪ ನದಿಗಳಾದ ದಕ್ಷಿಣ ಪಿನಾಕಿನಿ (ತಮಿಳುನಾಡಿನಲ್ಲಿ ಇದಕ್ಕೆ ಥೇನ್ ಪೆನ್ನಾರ್ ಎಂದು ಕರೆಯುತ್ತಾರೆ) ಹಾಗೂ ಅರ್ಕಾವತಿ ನದಿಗಳ ನೀರನ್ನು ಪರೀಕ್ಷೆಗೆ ಒಳಪಡಿಸಿತ್ತು. 
ಈ ಪರೀಕ್ಷೆಯಲ್ಲಿ ಈ ಮೂರು ನದಿಗಳ ನೀರು ಮಲಿನವಾಗಿದೆ ಎಂಬ ಫಲಿತಾಂಶ ಬಂದಿದ್ದು, ಈ ಕುರಿತ ವರದಿಯನ್ನು ಮಂಡಳಿಯು ಸುಪ್ರೀಂಕೋರ್ಟ್'ಗೆ ಕಳೆದ ಶುಕ್ರವಾರ ಸಲ್ಲಿಸಿದೆ ಎಂದು ವರದಿಗಳು ತಿಳಿಸಿವೆ. 
ಈ ವರದಿಯನ್ನು ಮುಂದಿಟ್ಟುಕೊಂಡು ಇನ್ನೆರಡು ವಾರಗಳಲ್ಲಿ ನಡೆಯುವ ಮುಂದಿನ ವಿಚಾರಣೆ ವೇಳೆ ಕರ್ನಾಟಕವು ಕಾವೇರಿ ನೀರನ್ನು ಮಲಿನ ಮಾಡುತ್ತಿದೆ ಇದರಿಂದ ನಮ್ಮ 19 ಜಿಲ್ಲೆಗಳ ಜನರ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಆದ್ದರಿಂದ ಕರ್ನಾಟಕದ ರಾಜ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಮಿಳುನಾಡು ಮನವಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 
ಕರ್ನಾಟಕದಲ್ಲಿ ಚರಂಡಿ ನೀರು ಹಾಗೂ ಕಾರ್ಖಾನೆಗಳ ತ್ಯಾಜ್ಯವನ್ನು ಕಾವೇರಿ ನದಿಗೆ ಮತ್ತು ಅದರ ಉಪ ನದಿಗಳಾದ ಅರ್ಕಾವತಿ ಹಾಗೂ ದಕ್ಷಿಣ ಪಿನಾಕಿನಿ ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ತಮಿಳುನಾಡಿಗೆ ಹರಿಯುವ ಕಾವೇರಿ ನೀರು ಮಲಿವಾಗಿದೆ. ಇದು ಕಾವೇರಿ ನೀರನ್ನೇ ಕುಡಿಯುವ ನೀರಿಗಾಗಿ ಅವಲಂಬಿಸಿರುವ ತಮಿಳುನಾಡಿನ ಶೇ.20ರಷ್ಟು ಜನರಿಗೆ ಸಮಸ್ಯೆಯನ್ನು ತಂದೊಡ್ಡಿದೆ ಎಂದು 2015ರಲ್ಲಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. 
ತಮಿಳುನಾಡು ರಾಜ್ಯದ ಮನವಿನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಕಾವೇರಿ ನೀರನ್ನು ಪರೀಕ್ಷೆಗೊಳಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. 
ಅದರಂತೆ, ಮೂರು ನದಿಗಳ ನೀರಿನ ಮಾದರಿಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗಳು ಜಂಟಿಯಾಗಿ ಪರೀಕ್ಷೆಗೆ ಒಳಪಡಿಸಿದ್ದವು. ಕಾವೇರಿ ನದಿಯ ನೀರನ್ನು ಅಜ್ಜಿಬೋರೆ ಎಂಬಲ್ಲಿ ಪಿನಾಕಿನೀ ನೀರನ್ನು ಚೊಕ್ಕರಸನಹಳ್ಳಿ ಎಂಬಲ್ಲಿ ಹಾಗೂ ಅರ್ಕಾವತಿ ನೀರನ್ನು ಸಂಗಮದ ಬಳಿ ಸಂಗ್ರಹಿಸಲಾಗಿತ್ತು. 
ದಕ್ಷಿಣ ಪಿನಾಕಿನಿ ನದಿ ಸಂಪೂರ್ಣ ಮಲಿನಗೊಂಡಿದೆ. ಅದನ್ನು ಶುದ್ಧೀಕರಿಸಲು ಸಮಗ್ರ ಯೋಜನೆಯ ಅಗತ್ಯವಿದೆ. ಅರ್ಕಾವತಿ ಮತ್ತು ಕಾವೇರಿ ನದಿಯ ನೀರಿನಲ್ಲಿ ಫೇಕರ್ ಕಾಲಿಫಾರ್ಮ್ ಅಂಶ ಜಾಸ್ತಿಯಿದೆ. ಬಯಲು ಮಲ ವಿಸ್ರಜನೆ ಮತ್ತು ಕಾರ್ಖಾನೆಗಳ ತ್ಯಾಜ್ಯದಿಂದಾಗಿ ಈ ಸಮಸ್ಯೆ ಎದುರಾಗಿದೆ. ಇವುಗಳನ್ನು ಕರ್ನಾಟಕ ರಾಜ್ಯ ಸರ್ಕಾರ ನಿಯಂತ್ರಿಸಬೇಕು ಎಂದು ವರದಿಯಲ್ಲಿ ಸಿಬಿಸಿಬಿ ತಿಳಿಸಿದೆ. 
ಅರ್ಕಾವತಿ ನದಿ ಹಾಗೂ ಅಜ್ಜಿಬೋರೆಗಿಂತ ಹಿಂದೆ ಕಾವೇರಿ ನದಿಯ ನೀರು ಮೊದಲ 3 ಹಂತದ ಪರೀಕ್ಷೆಗಳಲ್ಲಿ ಅಂದರೆ, ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳಲ್ಲಿ ನೀರಿನ ಮಾದರಿಯನ್ನು ಸಂಗ್ರಹಿಸಿ ನಡೆಸಿದ ಪರೀಕ್ಷೆಯಲ್ಲಿ ಮಾಲಿನ್ಯದ ಮಿತಿಯ ಒಳಗೇ ಇದೆ. ಆದರೆ, ಡಿಸೆಂಬರ್ ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮಾಲಿನ್ಯದ ಮಿತಿಯನ್ನು ದಾಟಿದೆ. ದಕ್ಷಿಣ ಪಿನಾಕಿನಿ ನದಿಯ ನೀರು ಎಲ್ಲಾ 4 ತಿಂಗಳುಗಳಲ್ಲೂ ಮಲಿವಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com