'ಸುಳ್ಳಿನ ವಿರುದ್ಧ ಸತ್ಯಕ್ಕೆ ಜಯ': ಜೈಲಲ್ಲೇ ಉಪ ಚುನಾವಣೆ ಗೆಲವು ಸಂಭ್ರಮಿಸಿದ ಲಾಲೂ

ಬಿಹಾರ ಉಪ ಚುನಾವಣೆಯ ಫಲಿತಾಂಶ ಸುಳ್ಳಿನ ವಿರುದ್ಧ ಸತ್ಯಕ್ಕೆ ಜಯ ಎಂದು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪಾಟ್ನಾ: ಬಿಹಾರ ಉಪ ಚುನಾವಣೆಯ ಫಲಿತಾಂಶ ಸುಳ್ಳಿನ ವಿರುದ್ಧ ಸತ್ಯಕ್ಕೆ ಜಯ ಎಂದು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.
ಮೇವು ಹಗರಣ ಸಂಬಂಧ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರು ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಜೈಲಲ್ಲೇ ತಮ್ಮ ಬೆಂಬಲಿಗರೊಂದಿಗೆ ಸಂಭ್ರಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಲಾಲು ಪ್ರಸಾದ್ ಯಾದವ್, ತಮ್ಮ ವಿರುದ್ಧದ ಎಲ್ಲ ಷಡ್ಯಂತ್ರಗಳಿಗೆ ರಾಜ್ಯದ ಜನತೆ ಸೂಕ್ತ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಇದು ನಿಜಕ್ಕೂ ಸುಳ್ಳಿನ ವಿರುದ್ಧ ಸತ್ಯಕ್ಕೆ ಸಂದ ಜಯವಾಗಿದೆ. ಪಿತೂರಿ ಮಾಡಿ ನೀವು ಎಷ್ಚೇ ಸೀಮೆ ಎಣ್ಣೆ ಸುರಿದರೂ ಲಾಟೀನು (ಆರ್ ಜೆಡಿ ಪಕ್ಷದ ಚಿನ್ಹೆ) ಅಷ್ಟೇ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತದೆ. ನನ್ನ ವಿರುದ್ಧ ನಡೆದ ಪಿತೂರಿಗೆ ಬಿಹಾರದ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಲಾಲೂ ಪ್ರಸಾದ್ ಯಾದವ್ ಅವರು ಹೇಳಿದ್ದಾರೆ.
ಅಲ್ಲದೆ ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದ ಹೇಳಿರುವ ಲಾಲೂ ಪ್ರಸಾದ್ ಯಾದವ್ ಅವರು, ತಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಅಂತೆಯೇ ಮುಂದೆಯೂ ಒಗ್ಗೂಡಿ ಹೋರಾಡೋಣ ಎಂದು ಕರೆ ನೀಡಿದ್ದಾರೆ.
ಇನ್ನು ಇಂದು ಪ್ರಕಟವಾದ ಬಿಹಾರ ಉಪ ಚುನಾವಣೆಯ ಫಲಿತಾಂಶದಲ್ಲಿ ಆರ್ ಜೆಡಿ ಎರಡು ಮತ್ತು ಬಿಜೆಪಿ 1 ರಲ್ಲಿ ಗೆಲುವು ಸಾಧಿಸಿದೆ. ಬಿಹಾರದ ಅರಾರಿಯಾ ಮತ್ತು ಜೆಹನ್ ಬಾದ್ ಕ್ಷೇತ್ರಗಳಲ್ಲಿ ಆರ್ ಜೆಡಿ ಅಭ್ಯರ್ಥಿಗಳು ಅಭೂತಪೂರ್ವ ಜಯಸಾಧಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com