ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘಿಸಿ ಐವರು ನಾಗರಿಕರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ದೆಹಲಿಯಲ್ಲಿರುವ ಪಾಕಿಸ್ತಾನದ ಡೆಪ್ಯುಟಿ ಹೈಕಮಿಷನರ್ ಅನ್ನು ಕರೆಯಿಸಿಕೊಂಡು ತೀವ್ರ ಖಂಡನೆ ವ್ಯಕ್ತಪಡಿಸಿದೆ.
ನಾಗರಿಕರ ಹತ್ಯೆಯನ್ನು ಪಾಕಿಸ್ತಾನ ಡೆಪ್ಯುಟಿ ಹೈಕಮಿಷನರ್ ಸಯೀದ್ ಹೈದರ್ ಶಾಹ್ ಸಹ ಖಂಡಿಸಿದ್ದು, ಅಂತಹ ಹೀನ ಕೃತ್ಯ ಸ್ಥಾಪಿತ ಮಾನವೀಯ ಮೌಲ್ಯಗಳಿಗೆ ಮತ್ತು ವೃತ್ತಿಪರ ಸೇನಾ ವರ್ತನೆಗೆ ವಿರುದ್ಧವಾಗಿದೆ ಎಂದು ಹೇಳಿರುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮುಗ್ದ ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವುದು ಖಂಡನೀಯವಾಗಿದ್ದು, ಈ ಘಟನೆಯನ್ನು ಭಾರತ ಕಠಿಣ ಶಬ್ದಗಳಲ್ಲಿ ಖಂಡಿಸಿದೆ ಎಂದು ಸಚಿವಾಲಯ ತಿಳಿಸಿದೆ.
ಮಾರ್ಚ್ 18ರಂದು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಭಿಂಬೆರ್ ಗಲಿ ಸೆಕ್ಟರ್ ನಲ್ಲಿ ಪಾಕ್ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿದ್ದರು.